ಟರ್ಕಿ: ಇರಾನ್ (Iran) ಜೊತೆ ಸುದೀರ್ಘ ಸಂಘರ್ಷಕ್ಕೆ ಅಂತ್ಯಹಾಡಲು ಕೇವಲ ಮೂರು ವಾರಗಳ ಹಿಂದಷ್ಟೇ ಸಹಿ ಹಾಕಲಾಗಿದ್ದ ದ್ವಿಪಕ್ಷೀಯ ಕದನ ವಿರಾಮ (Ceasefire) ಶಾಂತಿ ಒಪ್ಪಂದವು ಮುಕ್ತಾಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald trump) ಘೋಷಿಸಿದ್ದಾರೆ. ಜಾಗತಿಕ ಇಂಧನ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಮೂರು ವಾಣಿಜ್ಯ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದ ಬೆನ್ನಲ್ಲೇ, ಅಮೆರಿಕವು ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ರಾತ್ರೋರಾತ್ರಿ ಕ್ಷಿಪಣಿ ದಾಳಿ ನಡೆಸುವ ಮೂಲಕ ಪ್ರತಿಕಾರ ತೀರಿಸಿಕೊಂಡಿದೆ. ಇದರೊಂದಿಗೆ ಉಭಯ ದೇಶಗಳ ನಡುವೆ ಮತ್ತೆ ಮಹಾಯುದ್ಧದ ಕಾರ್ಮೋಡ ಕವಿದಿದೆ.
ಟರ್ಕಿಯಲ್ಲಿ ನಡೆಯುತ್ತಿರುವ ನ್ಯಾಟೋ (NATO) ಶೃಂಗಸಭೆಯಲ್ಲಿ ಭಾಗವಹಿಸಿ ಆಕ್ರೋಶದಿಂದ ಮಾತನಾಡಿದ ಅಧ್ಯಕ್ಷ ಟ್ರಂಪ್, ಇರಾನ್ ನಾಯಕರನ್ನು ಕೊಳಕರು (Scum) ಮತ್ತು ವಿಕೃತ ಮನಸ್ಸಿನವರು (Sick people) ಎಂದು ನಿಂದಿಸಿದ್ದು, ಇನ್ಮುಂದೆ ತಾವು ಟೆಹ್ರಾನ್ ಜೊತೆ ಯಾವುದೇ ರೀತಿಯ ರಾಜತಾಂತ್ರಿಕ ಮಾತುಕತೆ ನಡೆಸಲು ಇಷ್ಟಪಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಇರಾನ್ ಮೇಲೆ ಅಮೆರಿಕ ತೀವ್ರ ದಾಳಿ – 80 ಮಿಲಿಟರಿ ನೆಲೆಗಳು ಧ್ವಂಸ!
ನನಗೆ ಆ ಒಪ್ಪಂದ ಮುಗಿದ ಅಧ್ಯಾಯ
ಕೇವಲ ಮೂರು ವಾರಗಳ ಹಿಂದೆ ಇರಾನ್ ಸರ್ಕಾರದೊಂದಿಗೆ ಮಾಡಿಕೊಳ್ಳಲಾಗಿದ್ದ ಐತಿಹಾಸಿಕ ಒಪ್ಪಂದದ (MoU) ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಟ್ರಂಪ್ ಉತ್ತರಿಸಿದರು. ನನ್ನ ಪಾಲಿಗೆ ಆ ಒಪ್ಪಂದ ಈಗ ಮುಗಿದ ಅಧ್ಯಾಯ. ಇನ್ಮುಂದೆ ನಾನು ಅವರೊಂದಿಗೆ ಯಾವುದೇ ವ್ಯವಹಾರ ಅಥವಾ ಮಾತುಕತೆ ನಡೆಸಲು ಬಯಸುವುದಿಲ್ಲ ಎಂದರು.
ಪರಮಾಣು ಅಸ್ತ್ರವಿದ್ದರೆ ಬಳಸುತ್ತಿದ್ದರು!
ಇರಾನ್‌ನ ಪ್ರಸ್ತುತ ರಾಜಕೀಯ ನಾಯಕತ್ವದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಟ್ರಂಪ್, ಅವರು ಅತ್ಯಂತ ಕ್ರೂರಿಗಳು, ಹಿಂಸಾಚಾರ ಪ್ರವೃತ್ತಿಯ ಹಾಗೂ ವಿಕೃತ ಮನಸ್ಸಿನ ಜನಗಳಾಗಿದ್ದಾರೆ. ಒಂದು ವೇಳೆ ಇರಾನ್ ಬಳಿ ಸದ್ಯಕ್ಕೆ ಪರಮಾಣು ಬಾಂಬ್ (Nuclear Weapon) ಇರುತ್ತಿದ್ದರೆ, ಅವರು ಈ ಹೊತ್ತಿಗಾಗಲೇ ಅದನ್ನು ಇಡೀ ವಿಶ್ವದ ವಿರುದ್ಧ ಬಳಸಿಬಿಡುತ್ತಿದ್ದರು ಎಂದು ಕಳವಳ ವ್ಯಕ್ತಪಡಿಸಿದರು.
ಇದೇ ವೇಳೆ, ಅಮೆರಿಕ ಮತ್ತು ಇರಾನ್‌ನ ರಾಜತಾಂತ್ರಿಕ ಅಧಿಕಾರಿಗಳು ಹಾಗೂ ಸಂಧಾನಕಾರರು ಬೇಕಿದ್ದರೆ ತಮ್ಮ ಮಟ್ಟದಲ್ಲಿ ಮಾತುಕತೆಯನ್ನು ಮುಂದುವರಿಸಬಹುದು ಎಂದು ಟ್ರಂಪ್ ಸಡಿಲಿಕೆ ನೀಡಿದರಾದರೂ, ಅಂತಹ ವಿಕೃತ ಮನಸ್ಸಿನವರ (Cuckoos) ಜೊತೆ ಮಾತನಾಡುವುದು ಕೇವಲ ಸಮಯದ ವ್ಯರ್ಥ (Waste of time) ಅಷ್ಟೇ. ಆ ಮಾತುಕತೆಯಿಂದ ಜಗತ್ತಿಗೆ ಯಾವುದೇ ಸಕಾರಾತ್ಮಕ ಪ್ರಯೋಜನ ಸಿಗುವುದಿಲ್ಲ ಎಂದು ಲೇವಡಿ ಮಾಡಿದರು.