Thursday, July 16, 2026
Homeಟಾಪ್ ನ್ಯೂಸ್US-IRAN WAR: ಬಹ್ರೇನ್ ,ಕುವೈತ್ ನ ಯುಎಸ್ ಮಿಲಿಟರಿ ನೆಲೆಗಳ ಮೇಲೆ ಇರಾನ್ ದಾಳಿ

US-IRAN WAR: ಬಹ್ರೇನ್ ,ಕುವೈತ್ ನ ಯುಎಸ್ ಮಿಲಿಟರಿ ನೆಲೆಗಳ ಮೇಲೆ ಇರಾನ್ ದಾಳಿ

ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷ (US-Iran War) ಅತ್ಯಂತ ಅಪಾಯಕಾರಿ ಹಂತಕ್ಕೆ ತಲುಪಿದ್ದು, ಜಾಗತಿಕ ಮಟ್ಟದಲ್ಲಿ ತೃತೀಯ ಮಹಾಯುದ್ಧದ ಭೀತಿ ಎದುರಾಗಿದೆ. ಅಮೆರಿಕ ಇತ್ತೀಚೆಗಷ್ಟೇ ಇರಾನ್‌ನ ತೈಲ (Oil) ರಫ್ತು ಪರವಾನಗಿಯನ್ನು ರದ್ದುಗೊಳಿಸಿ, ಅಲ್ಲಿನ 80ಕ್ಕೂ ಹೆಚ್ಚು ಮಿಲಿಟರಿ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು. ಇದಕ್ಕೆ ತೀವ್ರ ಪ್ರತಿಕ್ರಿಯೆ ನೀಡಿರುವ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಬುಧವಾರ ಮುಂಜಾನೆ ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು 85ಕ್ಕೂ ಹೆಚ್ಚು ಕ್ಷಿಪಣಿ ಹಾಗೂ ಡ್ರೋನ್‌ಗಳ ಮೂಲಕ ಭೀಕರ ದಾಳಿ ನಡೆಸಿದೆ. ಅಷ್ಟೇ ಅಲ್ಲದೆ, ಈ ಕಾರ್ಯಾಚರಣೆಗೆ ಅಡ್ಡಿಪಡಿಸಲು ಬಂದ ಅಮೆರಿಕದ ಅತ್ಯಾಧುನಿಕ ಎಂಕ್ಯೂ-9 ರೀಪರ್ ಡ್ರೋನ್ ಅನ್ನು ಕೂಡ ತಾನು ಹೊಡೆದುರುಳಿಸಿರುವುದಾಗಿ ಇರಾನ್ ಘೋಷಿಸಿದೆ.

ಈ ಹಠಾತ್ ದಾಳಿಯಿಂದಾಗಿ ಬಹ್ರೇನ್ ಮತ್ತು ಕುವೈತ್ ದೇಶಗಳಾದ್ಯಂತ ಯುದ್ಧದ ಸೈರನ್‌ಗಳು ಮೊಳಗಿದ್ದು, ಜನರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಇರಾನ್ ಪಡೆಗಳು ಮುಖ್ಯವಾಗಿ ಬಹ್ರೇನ್‌ನಲ್ಲಿರುವ ಅಮೆರಿಕದ ಐದನೇ ನೌಕಾ ಜಿಲ್ಲೆ, ಬಂದರ್ ಸಲ್ಮಾನ್ ಹಾಗೂ ಶೇಖ್ ಈಸಾ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ. ಇತ್ತ ಕುವೈತ್‌ನಲ್ಲಿರುವ ಅಮೆರಿಕದ ಪ್ರಮುಖ ‘ಅಲಿ ಅಲ್ ಸೇಲಂ’ ವಾಯುನೆಲೆಯ ಮೇಲೂ ಇರಾನ್‌ನ ಡ್ರೋನ್‌ಗಳು ಅಪ್ಪಳಿಸಿದ್ದು, ಶತ್ರು ಕ್ಷಿಪಣಿಗಳನ್ನು ತಡೆಯಲು ಕುವೈತ್ ಮಿಲಿಟರಿ ತನ್ನ ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ತೀವ್ರ ಕಾರ್ಯಾಚರಣೆ ನಡೆಸುತ್ತಿದೆ ಎಂದು ಧೃಡಪಡಿಸಿದೆ.

ಕಳೆದ ಜೂನ್ ತಿಂಗಳಲ್ಲಿ ಉಭಯ ದೇಶಗಳ ನಡುವೆ ಮಾಡಿಕೊಳ್ಳಲಾಗಿದ್ದ ಮಧ್ಯಂತರ ಕದನ ವಿರಾಮ ಒಪ್ಪಂದದ ಪ್ರಕಾರ, ಇರಾನ್‌ಗೆ ಆಗಸ್ಟ್ 21ರವರೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಮಾರಾಟ ಮಾಡಲು ಅಮೆರಿಕ ವಿನಾಯಿತಿ ನೀಡಗಿತ್ತು. ಆದರೆ, ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಪಡೆಗಳು ಮೂರು ವಾಣಿಜ್ಯ ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಅಮೆರಿಕ ಈ ವಿನಾಯಿತಿಯನ್ನು ಅವಧಿಗಿಂತ ಮುನ್ನವೇ ರದ್ದುಗೊಳಿಸಿದೆ. ಅಲ್ಲದೆ ಜುಲೈ 17ರ ಒಳಗಾಗಿ ಎಲ್ಲಾ ವಹಿವಾಟುಗಳನ್ನು ನಿಲ್ಲಿಸುವಂತೆ ಗಡುವು ನೀಡಿದೆ. ಇದರಿಂದ ಕೆರಳಿದ ಅಮೆರಿಕದ ಯುದ್ಧ ವಿಮಾನಗಳು ಇರಾನ್‌ನ ಮುಖ್ಯ ತೈಲ ಕೇಂದ್ರಗಳಾದ ಖಾರ್ಗ್ ದ್ವೀಪ, ಕೆಶ್ಮ್ ದ್ವೀಪ, ಬಂದರ್ ಅಬ್ಬಾಸ್ ಮತ್ತು ಸಿರಿಕ್ ನಗರಗಳ ಮೇಲೆ ಬಾಂಬ್ ಮಳೆಗರೆದಿವೆ. ಈ ವಾಯುದಾಳಿಯಲ್ಲಿ ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳು, ಕರಾವಳಿ ರಾಡಾರ್‌ಗಳು ಹಾಗೂ ಐಆರ್‌ಜಿಸಿಗೆ ಸೇರಿದ 60ಕ್ಕೂ ಹೆಚ್ಚು ಸಣ್ಣ ಯುದ್ಧ ದೋಣಿಗಳು ಧ್ವಂಸಗೊಂಡಿವೆ.

ಈ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಕರ್ ಖಲೀಬಾಫ್, ಅಮೆರಿಕದ ಬೆದರಿಕೆ ಹಾಗೂ ಸುಲಿಗೆಯ ದಿನಗಳು ಮುಗಿದಿವೆ ಮತ್ತು ತಮ್ಮ ದೇಶದ ಹಿತಾಸಕ್ತಿ ರಕ್ಷಿಸಲು ಯಾವುದೇ ಕಾರಣಕ್ಕೂ ಶರಣಾಗದೆ ಕಠಿಣ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಸಿದ್ದಾರೆ. 2026ರ ಆರಂಭದಲ್ಲಿ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ನಡೆಸಿದ ದಾಳಿಯೊಂದಿಗೆ ಈ ಸಂಘರ್ಷ ಆರಂಭವಾಗಿತ್ತು. ಇತ್ತೀಚೆಗೆ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಅಲ್ಲಿನ ಜನಾಕ್ರೋಶ ಹೆಚ್ಚಾಗಿತ್ತು. ಸದ್ಯ ಕತಾರ್‌ನಲ್ಲಿ ನಡೆಯುತ್ತಿದ್ದ ಶಾಂತಿ ಮಾತುಕತೆಗಳೂ ಮುರಿದುಬಿದ್ದಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಸಂಪೂರ್ಣವಾಗಿ ಒಪ್ಪಂದಕ್ಕೆ ಬಾರದಿದ್ದರೆ ಮಿಲಿಟರಿ ಮೂಲಕ ಇರಾನ್ ದೇಶವನ್ನೇ ಮುಗಿಸಬೇಕಾಗುತ್ತದೆ ಎಂದು ಎಚ್ಚರಿಸಿರುವುದರಿಂದ ಜಗತ್ತಿನಲ್ಲಿ ತೃತೀಯ ಮಹಾಯುದ್ಧದ ಭೀತಿ ಮೂಡಿದೆ.

ಇದನ್ನೂ ಓದಿ : ಇರಾನ್ ಮೇಲೆ ಅಮೆರಿಕ ತೀವ್ರ ದಾಳಿ – 80 ಮಿಲಿಟರಿ ನೆಲೆಗಳು ಧ್ವಂಸ!

ಹೆಚ್ಚಿನ ಸುದ್ದಿ

Change Language »
error: Content is protected !!