ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಉರಿಗೌಡ-ನಂಜೇಗೌಡ ವಿವಾದ ಸದ್ಯ ಸಿನೆಮಾ ಹಂತ ತಲುಪಿದ್ದು, ಮುನಿರತ್ನ ನಿರ್ಮಿಸುವುದಾಗಿ ಘೋಷಿಸಿದ್ದಾರೆ.
ಉರಿ-ನಂಜೇಗೌಡರ ಸಿನೆಮಾ ನಿರ್ಮಾಣದ ಬಗ್ಗೆ ಒಕ್ಕಲಿಗ ನಾಯಕರ ಹಾಗೂ ಸಂಘಟನೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ರಾಜಕೀಯ ಹುನ್ನಾರಗಳಿಗಾಗಿ ಒಕ್ಕಲಿಗ ಸಮುದಾಯವನ್ನು ಕೊಲೆಗಾರರಂತೆ ಬಿಂಬಿಸಬಾರದೆಂಬ ಆಗ್ರಹ ಕೇಳಿ ಬಂದಿದೆ.
ಇದೆಲ್ಲದರ ನಡುವೆ ನಿರ್ಮಲಾನಂದನಾಥ ಶ್ರೀಗಳು ಎಂಟ್ರಿಯಾಗಿದ್ದು, ಸಚಿವ ಮುನಿರತ್ನರನ್ನು ಮಾತುಕತೆಗಾಗಿ ಕರೆದಿದ್ದಾರೆ. ನಿರ್ಮಲಾನಂದನಾಥರಿಂದ ಬುಲಾವ್ ಬರುತ್ತಿದ್ದಂತೆ ಸೈಲೆಂಟ್ ಆಗಿರುವ ಮುನಿರತ್ನ, ಚಿತ್ರದ ಬಗ್ಗೆ ಸದ್ಯಕ್ಕೆ ಏನೂ ಮಾತನಾಡಲ್ಲ ಎಂದಿದ್ದಾರೆ.
ಶ್ರೀಗಳ ಭೇಟಿ ಬಳಿಕ ಸಿನಿಮಾ ನಿರ್ಮಾಣದ ಬಗ್ಗೆ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಮುನಿರತ್ನ ಹೇಳಿದ್ದಾರೆ. ನಾನೊಬ್ಬ ನಿರ್ಮಾಪಕನಾಗಿ ಉರಿಗೌಡ-ನಂಜೇಗೌಡ ಚಿತ್ರ ನಿರ್ಮಾಣ ಮಾಡಬೇಕೆಂದಿದ್ದೆ. ಈ ನಡುವೆ, ನಾಳೆ (ಮಾರ್ಚ್ 20) ನಿರ್ಮಲಾನಂದನಾಥ ಸ್ವಾಮೀಜಿಯವರು ಬರಲು ಹೇಳಿದ್ದಾರೆ. ಅವರೊಟ್ಟಿಗೆ ಚರ್ಚೆ ಮಾಡುವವರೆಗೆ ಸಿನಿಮಾದ ಬಗ್ಗೆ ಮಾತನಾಡುವುದಿಲ್ಲ, ಅವರ ಸಲಹೆ ಮೇರೆಗೆ ಮುಂದುವರೆಯುವುದಾಗಿ ಮುನಿರತ್ನ ಹೇಳಿದ್ದಾರೆ.
ಟಿಪ್ಪು ಸುಲ್ತಾನರನ್ನು ಇಬ್ಬರು ಒಕ್ಕಲಿಗರು ಕೊಂದಿದ್ದಾರೆಂದು ಬಿಜೆಪಿ ಭರ್ಜರಿ ಪ್ರಚಾರ ಮಾಡುತ್ತಿದ್ದು, ಒಕ್ಕಲಿಗ ಮತಗಳನ್ನು ಸೆಳೆಯಲು ಒಕ್ಕಲಿಗರಾದ ಆರ್ ಅಶೋಕ್ ಮತ್ತು ಸಿಎನ್ ಅಶ್ವತ್ ನಾರಾಯಣ್ ರನ್ನು ಮುಂದೆ ಬಿಟ್ಟಿದೆ. ಇತಿಹಾಸ ತಜ್ಞರು ಈ ವಾದಗಳನ್ನು ನಿರಾಕರಿಸುತ್ತಲೇ ಬಂದಿದ್ದರಾದರೂ ಬಿಜೆಪಿ ನಾಯಕರು ತಮ್ಮ ವಾದಗಳನ್ನು ಬಲವಾಗಿ ಸಮರ್ಥಿಸುತ್ತಿದ್ದಾರೆ. ಈ ನಡುವೆ ಆದಿಚುಂಚನಗಿರಿಯ ಸ್ವಾಮಿಗಳು ವಿಷಯದ ಬಗ್ಗೆ ಮಾತನಾಡಲು ಮುನಿರತ್ನರನ್ನು ಕರೆಸಿರುವುದರಿಂದ ವಿವಾದಕ್ಕೆ ತಾರ್ಕಿಕ ಅಂತ್ಯ ದೊರೆಯುವ ಸಾಧ್ಯತೆಯನ್ನು ನಿರೀಕ್ಷಿಸಲಾಗುತ್ತಿದೆ.