Sunday, November 10, 2024
Homeಬೆಂಗಳೂರುಬೊಮ್ಮನಹಳ್ಳಿಯಲ್ಲಿ ೧ ಸಾವಿರ ಕೋಟಿ ಹಗರಣ. ಶಾಸಕರ ತಂದೆಯೇ ಶಾಮೀಲು ಆರೋಪ!

ಬೊಮ್ಮನಹಳ್ಳಿಯಲ್ಲಿ ೧ ಸಾವಿರ ಕೋಟಿ ಹಗರಣ. ಶಾಸಕರ ತಂದೆಯೇ ಶಾಮೀಲು ಆರೋಪ!

ಬೆಂಗಳೂರಿನಲ್ಲಿ ಬರೋಬ್ಬರಿ 1 ಸಾವಿರ ಕೋಟಿ ಮೌಲ್ಯದ ಬಿಡಿಎ ಸ್ವತ್ತನ್ನು ಕಬಳಿಕೆ ಮಾಡಲಾಗಿದೆ. ಕಾನೂನು ಬಾಹಿರವಾಗಿ ಕಬಳಿಕೆ ಮಾಡಲಾಗಿರೋ ಈ ಸ್ವತ್ತಿನ ಹಿಂದೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ಮಾಜಿ ಡೆಪ್ಯೂಟಿ ಮೇಯರ್ ಮೋಹನ್ ರಾಜು ಹಾಗು ಅವರ ಪತ್ನಿಯ ಕೈವಾಡ ಇದೆ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಆರೋಪಿಸಿದ್ದಾರೆ. ಬೆಂಗಳೂರು ದಕ್ಷಿಣ ತಾಲ್ಲೂಕು ಬೇಗೂರು ಹೋಬಳಿಯ ದೇವರಚಿಕ್ಕನಹಳ್ಳಿ ಗ್ರಾಮಕ್ಕೆ ಸೇರಿದ ಸುಮಾರು 1 ಸಾವಿರ ಕೋಟಿಗಳಿಗೂ ಹೆಚ್ಚಿನ ಬೆಲೆ ಬಾಳುವ  25 ಎಕರೆಗೂ ಹೆಚ್ಚು ಜಾಗವನ್ನು ಬಿಡಿಎ ಅಧಿಕಾರಿಗಳು ಶಾಮೀಲಾಗಿ ಪ್ರಭಾವೀ ಬಂಡವಾಳಶಾಹಿಗಳು ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಟಿಎಂ ಅಧಿಸೂಚಿತ ಬಡಾವಣೆ  ಸೇರಿ 1986-87ರಲ್ಲಿ ಪ್ರಾಥಮಿಕ ಅಧಿಸೂಚನೆ ಆಗಿ 1998ರ ಅಂತಿಮ ಅಧಿಸೂಚನೆಯಾಗಿ ಬಡಾವಣೆ ನಿರ್ಮಾಣಗೊಂಡಿತ್ತು. ಈ ಬಡಾವಣೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪ್ರಾಧಿಕಾರ, ತನ್ನ ಅಂತಿಮ ಅಧಿಸೂಚನೆ ಹೊರಡಿಸಿ ಭೂಪರಿಹಾರವನ್ನು ನೀಡಿ ಬಡಾವಣೆ ನಿರ್ಮಿಸಿತ್ತು. ರಸ್ತೆ, ಒಳಚರಂಡಿ, ವಿದ್ಯುತ್‌ ಸಂಪರ್ಕ ಸೇರಿದಂತೆ ಅನೇಕ ಸೌಲಭ್ಯಗಳನ್ನು 30 ವರ್ಷಗಳ ಹಿಂದೆಯೇ 16 ಕೋಟಿಗಳ ವೆಚ್ಚದಲ್ಲಿ ಬಡಾವಣೆಗಾಗಿ ಖರ್ಚು ಮಾಡಿತ್ತು. ಹೀಗಿದ್ದೂ ಕೆಲವರು ಬಿಡಿಎ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದರು. ಆಗ, ಹೈಕೋರ್ಟ್ ವಿಭಾಗೀಯ ಪೀಠದಲ್ಲೂ ಸಹ ಎನ್. ಕುಮಾರ್ ಆದೇಶವನ್ನೇ ಎತ್ತಿಹಿಡಿದು. ತೀರ್ಪು ಬಿಡಿಎ ಪರವಾಗಿ ಆದೇಶ ನೀಡಿತ್ತು ಎಂದು ಹೇಳಿದರು.

ಆದರೆ, 2012ರಲ್ಲಿ ಈ ಆದೇಶಗಳ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋದ ಭೂ ಮಾಲೀಕರಿಗೆ ಮತ್ತೆ ನಿರಾಸೆಯೇ ಗತಿಯಾಯ್ತು.  ಸುಪ್ರೀಂಕೋರ್ಟ್ ಕೂಡ ಹೈಕೋರ್ಟ್ ವಿಭಾಗೀಯ ಪೀಠದ ಆದೇಶದ ಮನವಿಯನ್ನು ಪುರಸ್ಕರಿಸಿ ಈಗಾಗಲೇ 30 ವರ್ಷಗಳು ಕಳೆದಿರುವ ಈ ಪ್ರಕರಣಕ್ಕೆ  ತಡೆ ನೀಡಲಾಗುವುದಿಲ್ಲ ಹಾಗೂ ನಿಮ್ಮ ಮನವಿಯನ್ನು ತಿರಸ್ಕರಿಸಲಾಗಿದೆ ಎಂಬ ಹಿಂಬರಹವನ್ನು ನೀಡಿ ಬಿಡಿಎ ಬೆನ್ನಿಗೆ ನಿಂತಿದೆ ಎಂಬುದು ಉಮಾಪತಿ ಆಕ್ಷೇಪ.

ಆದ್ರೆ 2016ರ ನಂತರ ಹೊಸ ಮ್ಯಾಜಿಕ್ ನಡೆದುಹೋಯ್ತು. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಆದೇಶಗಳನ್ನೆಲ್ಲಾ ಮುಚ್ಚಿಟ್ಟು ತಮ್ಮ ಪ್ರಭಾವ ಬೀರಿದ ಪ್ರಾಧಿಕಾರದ ಭ್ರಷ್ಟರು, ಕಾನೂನು ವಿಭಾಗದ ನ್ಯೂನತೆಗಳನ್ನ ದುರ್ಬಳಕೆ ಮಾಡಿಕೊಂಡು ಅಧಿಸೂಚನೆಯೇ ಅಲ್ಲದ ಬೇರೆ ಸರ್ವೆ ನಂಬರ್ ಅನ್ನು ಕೋರ್ಟ್ ಮುಂದೆ ತಂದು ಹೊಸ ಆದೇಶದ ಮೂಲಕ ಪ್ರಾಧಿಕಾರದ ಜಾಗವನ್ನು ಕಬ್ಜಾ ಮಾಡಿರುತ್ತಾರೆ ಎಂದು ಆರೋಪಿಸಿದ್ದಾರೆ ಉಮಾಪತಿ.

ಅಧಿಕಾರಿಗಳನ್ನು ಕಬ್ಜ ಮಾಡಿರೋ ಪ್ರಭಾವಿಗಳು ಜಾಗದ ಒಳಹೋಗಲು ಬಿಡದೆ ಸುತ್ತಲೂ ಕಾಂಪೌಂಡ್ ನಿರ್ಮಿಸಿ ರೆವಿನ್ಯೂ ಬಡಾವಣೆ ನಿರ್ಮಿಸಿದ್ದಾರೆ. ಒಂದು ಅಡಿಗೆ 12 ಸಾವಿರದಂತೆ ಮಾರಾಟ ಮಾಡುತ್ತಿದ್ದಾರೆ. ಇನ್ನು ಕೆಲವೇ ತಿಂಗಳುಗಳಲ್ಲಿ ಇಲ್ಲಿ ಗಗನಚುಂಬಿ ಅಪಾರ್ಟ್ ಮೆಂಟ್‌ಗಳು ತಲೆ ಎತ್ತಲಿವೆ. ಇಷ್ಟೆಲ್ಲಾ ಸಮಸ್ಯೆಗಳಿದ್ರೂ ಅದ್ಯಾಕೋ ಬಿಡಿಎ ಮಾತ್ರ ಮೌನವಹಿಸಿದ್ದು, ಇದು ಮತ್ತಷ್ಟು ಅನುಮಾನ ಮೂಡಿಸುತ್ತಿದೆ. ಈ ಹಿನ್ನೆಲೆ ಹೈಕೋರ್ಟ್‌ನಲ್ಲಿ ನೊಂದ 1210 ಜನರ ಪರವಾಗಿ ಪಿಐಎಲ್‌ ಸಲ್ಲಿಸೋದಾಗಿ ಹೇಳಿಕೆ ನೀಡಿದ್ದಾರೆ.

ಚುನಾವಣೆ ಹತ್ತಿರವಾಗ್ತಿದ್ದಂತೆ ಚುನಾಯಿತ ಪ್ರತಿನಿಧಿಗಳ ಮೇಲಿನ ಆರೋಪಗಳು ಹೊರಬೀಳುತ್ತಿವೆ. ಇದೀಗ ಸ್ಥಳೀಯ ಶಾಸಕ ಸತೀಶ್ ರೆಡ್ಡಿ ಕುಟುಂಬದ ವಿರುದ್ಧ ಹೊರಬಂದಿರುವ ಭೂಕಬಳಿಕೆ ಆರೋಪದ ವಿರುದ್ಧ ಉಮಾಪತಿ ಹೋರಾಟ ಮಾಡೋದಾಗಿ ಹೇಳಿದ್ದಾರೆ.

ಯಾರು ಈ ಉಮಾಪತಿ ಶ್ರೀನಿವಾಸ್ ಗೌಡ?

ಉದ್ಯಮಿ, ಸಿನಿಮಾ ನಿರ್ಮಾಪಕರಾಗಿರುವ ಉಮಾಪತಿ ಶ್ರೀನಿವಾಸ್ ಗೌಡ ಮೂಲತಃ ಮೂಡುಬಿದ್ರೆಯವರು. ಸುದೀಪ್ ನಟನೆಯ ‘ಹೆಬ್ಬುಲಿ’ , ದರ್ಶನ್ ನಟನೆಯ ರಾಬರ್ಟ್‌ ಹಾಗು ಮದಗಜ ಚಿತ್ರದ ನಿರ್ಮಾಕರಾಗಿದ್ದಾರೆ. ಸದ್ಯ ಉಮಾಪತಿ ಕಾಂಗ್ರೆಸ್ ಪಕ್ಷದಿಂದ ಬೊಮ್ಮನಹಳ್ಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!