ದಾವಣಗೆರೆ : ಚರಂಡಿ ಸ್ವಚ್ಛಗೊಳಿಸುವ ವೇಳೆ ವಿಷವಾಯು ಸೇವನೆಯಿಂದಾಗಿ ಇಬ್ಬರು ಪೌರಕಾರ್ಮಿಕರು ಉಸಿರುಗಟ್ಟಿ ಸತ್ತಿರುವ ದಾರುಣ ಘಟನೆ ದಾವಣಗೆರೆಯ ಜಗಳೂರು ತಾಲೂಕಿನ ಬಸವನಕೋಟೆಯಲ್ಲಿ ನಡೆದಿದೆ.
ಸತ್ಯಪ್ಪ (45) ಮತ್ತು ಮೈಲಪ್ಪ (42) ಮೃತ ದುರ್ದೈವಿಗಳು. ಅಧಿಕಾರಿಗಳ ನಿರ್ಲಕ್ಷ್ಯವೇ ಅಮಾಯಕ ಪೌರಕಾರ್ಮಿಕರ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಯಾವುದೇ ಮುಂಜಾಗ್ರತಾ ಕ್ರಮ ಹಾಗೂ ಸುರಕ್ಷತಾ ಸಾಧನಗಳಿಲ್ಲದೇ ಅಪಾಯಕಾರಿ ಕೆಲಸಕ್ಕೆ ನೂಕಿದ್ದೇ ಪೌರಕಾರ್ಮಿಕರು ಜೀವ ಕಳೆದುಕೊಳ್ಳಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದ ಚರಂಡಿಗಳನ್ನು ಸ್ವಚ್ಛಗೊಳಿಸಲು ಆದೇಶಿಸಲಾಗಿತ್ತು. ಬಸವನಕೋಟೆ ಗ್ರಾಮ ಪಂಚಾಯಿತಿ ಪಿಡಿಒ ಶಶಿಧರ ಪಾಟೀಲ್ ಆದೇಶದನ್ವಯ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ವಿಷವಾಯು ಸೇವನೆಯಿಂದ ಅಸ್ವಸ್ಥಗೊಂಡ ಪೌರಕಾರ್ಮಿಕರನ್ನು ಹತ್ತಿರದ ಅರಸೀಕೆರೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ವೈದ್ಯರ ಸಲಹೆಯಂತೆ ದಾವಣಗೆರೆ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಇಬ್ಬರೂ ಸಾವನ್ನಪ್ಪಿದ್ದಾರೆ.