Monday, June 15, 2026
Homeಕ್ರೈಂCRIME: ತ್ವಿಶಾ ಶರ್ಮಾ ಪ್ರಕರಣ: ಪತಿ ಸಮರ್ಥ್, ಅತ್ತೆ ಗಿರಿಬಾಲಾ ಸಿಂಗ್ ಗೆ 14 ದಿನಗಳ...

CRIME: ತ್ವಿಶಾ ಶರ್ಮಾ ಪ್ರಕರಣ: ಪತಿ ಸಮರ್ಥ್, ಅತ್ತೆ ಗಿರಿಬಾಲಾ ಸಿಂಗ್ ಗೆ 14 ದಿನಗಳ ನ್ಯಾಯಾಂಗ ಬಂಧನ!

ಭೋಪಾಲ್: ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ನೋಯ್ಡಾದ(Noida) ಸಾಫ್ಟ್‌ವೇರ್ ಉದ್ಯೋಗಿ ತ್ವಿಶಾ ಶರ್ಮಾ(Twisha Sharma) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತಿ ಸಮರ್ಥ್(Samarth) ಹಾಗೂ ಅತ್ತೆ ಮಾಜಿ ಜಿಲ್ಲಾ ನ್ಯಾಯಾಧೀಶರಾದ ಗಿರಿಬಾಲಾ ಸಿಂಗ್(Giribala Singh) ಅವರನ್ನು  ಜೂನ್ 16ರವರೆಗೆ 14 ದಿನಗಳ ನ್ಯಾಯಾಂಗ ಬಂಧನ (Judicial Coustody) ವಿಧಿಸಿದೆ.

ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶೋಭನಾ ಭಾಲಾವೆ ಅವರ ಮುಂದೆ ಆರೋಪಿಗಳನ್ನು ಹಾಜರುಪಡಿಸಿದ ಸಿಬಿಐ, ಹೆಚ್ಚಿನ ತನಿಖಾ ಕಸ್ಟಡಿ ತಮಗೆ ಬೇಡವೆಂದು ತಿಳಿಸಿ ನ್ಯಾಯಾಂಗ ಬಂಧನಕ್ಕೆ ಮನವಿ ಮಾಡಿತು. ಇದನ್ನು ಪುರಸ್ಕರಿಸಿದ ಕೋರ್ಟ್ ತಾಯಿ-ಮಗನನ್ನು ಜೈಲಿಗಟ್ಟಲು ಆದೇಶಿಸಿದೆ. ಆರೋಪಿಗಳ ಪೈಕಿ ಒಬ್ಬರು ನಿವೃತ್ತ ಹಿರಿಯ ನ್ಯಾಯಾಧೀಶರಾಗಿರುವುದರಿಂದ ಹಾಗೂ ಪ್ರಕರಣ ಭಾರಿ ಸೂಕ್ಷ್ಮವಾಗಿರುವುದರಿಂದ, ಜೈಲಿನ ಸುರಕ್ಷತೆಯ ದೃಷ್ಟಿಯಿಂದ ಇಬ್ಬರನ್ನೂ ಇತರ ಸಾಮಾನ್ಯ ಕೈದಿಗಳಿಂದ ಸಂಪೂರ್ಣವಾಗಿ ಬೇರ್ಪಡಿಸಿ, ಪ್ರತ್ಯೇಕ ಸೆಲ್‌ಗಳಲ್ಲಿ ಇರಿಸಲು ಜೈಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಇನ್ನು, ನ್ಯಾಯಾಲಯಕ್ಕೆ ಹಾಜರುಪಡಿಸುವ ಕೇವಲ 24 ಗಂಟೆಗಳ ಮುನ್ನ ಅಂದರೆ ಸೋಮವಾರವಷ್ಟೇ, ಭೋಪಾಲ್‌ನಲ್ಲಿರುವ ನಿವೃತ್ತ ನ್ಯಾಯಾಧೀಶೆಯ ಮನೆಗೆ ಸಿಬಿಐ ತನಿಖಾ ತಂಡ ಲಗ್ಗೆ ಇಟ್ಟಿತ್ತು. ಮೇ 12 ರಂದು ಆ ಕರಾಳ ರಾತ್ರಿ ಏನಾಗಿತ್ತು ಎಂಬುದನ್ನು ಪತ್ತೆ ಹಚ್ಚಲು ಒಂದು ನಿಖರವಾದ ಬೊಂಬೆಯನ್ನು (ಡಮ್ಮಿ ದೇಹ) ಬಳಸಿ ಇಡೀ ಘಟನಾವಳಿಗಳನ್ನು ಅಧಿಕಾರಿಗಳು ಮರುಸೃಷ್ಟಿ ಮಾಡಿದ್ದಾರೆ. ಆರೋಪಿಗಳ ಸಮ್ಮುಖದಲ್ಲೇ ನಡೆದ ಈ ‘ಕ್ರೈಮ್ ಸೀನ್ ರೀ-ಕ್ರಿಯೇಷನ್’ ವೇಳೆ ಸಿಬಿಐಗೆ ವರದಕ್ಷಿಣೆ ಕಿರುಕುಳದ ಡಿಜಿಟಲ್ ಸಾಕ್ಷ್ಯಗಳು ಸಿಕ್ಕಿವೆ ಎನ್ನಲಾಗಿದೆ.

ಕಳೆದ ಡಿಸೆಂಬರ್ 2025 ರಲ್ಲಿ ಹಸೆಮಣೆ ಏರಿದ್ದ 33 ವರ್ಷದ ತ್ವಿಶಾ ಶರ್ಮಾ, ಮದುವೆಯಾದ ಕೇವಲ ಐದೇ ತಿಂಗಳಲ್ಲಿ ಪತಿಯ ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದರು. ಮಗಳ ಸಾವಿಗೆ ಅತ್ತೆ ಮತ್ತು ಪತಿಯ ವರದಕ್ಷಿಣೆ ಆಸೆ ಹಾಗೂ ಮಾನಸಿಕ ಕಿರುಕುಳವೇ ನೇರ ಕಾರಣ ಎಂದು ಪೋಷಕರು ದೂರು ನೀಡಿದ್ದರು. ಆದರೆ, ತನಗಿರುವ ಕಾನೂನು ಜ್ಞಾನವನ್ನೇ ಅಸ್ತ್ರವಾಗಿಸಿಕೊಂಡಿದ್ದ ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ, ಬಂಧನಕ್ಕೂ ಮುನ್ನ ಮಾಧ್ಯಮಗಳ ಮುಂದೆ ಬಂದು ಮೃತ ಸೊಸೆಯ ಮಾನಸಿಕ ಸ್ಥಿತಿಯನ್ನೇ ಪ್ರಶ್ನಿಸಿ ಪಲಾಯನ ಮಾಡಲು ಯತ್ನಿಸಿದ್ದರು. ಆದರೆ ಸಿಬಿಐ ಎಂಟ್ರಿಯಿಂದಾಗಿ ಈ ಪ್ಲಾನ್ ಉಲ್ಟಾ ಹೊಡೆದಿದೆ.

ತ್ವಿಶಾ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ನೋಯ್ಡಾದಲ್ಲಿ ಇತ್ತೀಚೆಗೆ ನಡೆದ ಬೃಹತ್ ಮೌನ ಪ್ರತಿಭಟನೆಗೆ ಜನಸಾಗರವೇ ಹರಿದುಬಂದಿತ್ತು. ಈ ಹೋರಾಟದ ಮುಂಚೂಣಿಯಲ್ಲಿ ನಿಂತಿರುವ ತ್ವಿಶಾ ಸಹೋದರ, ದೇಶದ ಹೆಮ್ಮೆಯ ಸೇನಾ ಅಧಿಕಾರಿ ಮೇಜರ್ ಹರ್ಷಿತ್ ಶರ್ಮಾ, “ಇದು ಕೇವಲ ನಮ್ಮ ಕುಟುಂಬದ ಹೋರಾಟವಲ್ಲ, ವರದಕ್ಷಿಣೆ ಪಿಡುಗಿನ ವಿರುದ್ಧದ ಜನಾಕ್ರೋಶ. ನಮಗೆ ತನಿಖಾ ಸಂಸ್ಥೆಯ ಮೇಲೆ ನಂಬಿಕೆಯಿದೆ, ಸತ್ಯ ಗೆಲ್ಲುತ್ತದೆ” ಎಂದು ಸಿಬಿಐ ತನಿಖೆಯ ನಡೆಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತನಿಖೆ ಈಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಶೀಘ್ರದಲ್ಲೇ ಚಾರ್ಜ್‌ಶೀಟ್ ಸಲ್ಲಿಕೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ತ್ವಿಶಾ ಶರ್ಮಾ ಪ್ರಕರಣದ ಪ್ರಮುಖ ಸಾಕ್ಷಿ ಮೇಲೆ ಆರೋಪಿ ಸ್ನೇಹಿತರಿಂದ ಹಲ್ಲೆ!

ಹೆಚ್ಚಿನ ಸುದ್ದಿ

Change Language »
error: Content is protected !!