ಮಾಮಲ್ಲಪುರಂ : ತಮಿಳುನಾಡು ಚುನಾವಣೆ ರಂಗೇರುತ್ತಿದೆ. ಅದರಲ್ಲೂ ಟಿವಿಕೆ (TVK) ಪಕ್ಷ ಕಟ್ಟಿರೋ ವಿಜಯ್‌ಗೆ (Thalapathy Vijay) ಸಾಲು ಸಾಲು ಸವಾಲು ಎದುರಾಗುತ್ತಿವೆ. ಇದರ ಮಧ್ಯೆ ಪಕ್ಷಕ್ಕೆ ವಿಶಲ್ ಚಿಹ್ನೆ ಸಿಕ್ಕಿದೆ. ಅದರ ಬೆನ್ನಲ್ಲೇ ಮೊದಲ ಬಾರಿಗೆ ಮಾತಾಡಿದ ವಿಜಯ್ ‘ಇದು ಸಾಮಾನ್ಯ ಚುನಾವಣೆಯಲ್ಲ, ಪ್ರಜಾಪ್ರಭುತ್ವದ ಯುದ್ಧ ಎಂದು ಅಬ್ಬರಿಸಿದ್ರು.
ಸಿಬಿಐ ವಿಚಾರಣೆ ಹಾಗೂ ತಮ್ಮ ಮುಂಬರುವ ಚಿತ್ರದ ಬಿಡುಗಡೆಗೆ ಎದುರಾಗಿರುವ ಅಡೆತಡೆಗಳ ನಡುವೆಯೇ ತಮಿಳು ನಟ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಾನು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ, ಯಾರ ಮುಂದೆಯೂ ತಲೆಬಾಗುವುದಿಲ್ಲ ಎಂದು ಹೇಳಿದರು.
ಕರೂರು ಕಾಲ್ತಿಳಿತ ಪ್ರಕರಣದಲ್ಲಿ ಸಿಬಿಐ ವಿಚಾರಣೆಗೆ ಹಾಜರಾದ ಬಳಿಕ ಮತ್ತು ತಮ್ಮ ಕಡೆಯ ಚಿತ್ರ ಜನ ನಾಯಗನ್ಗೆ ಕೇಂದ್ರ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡದೇ ಇರುವ ವಿವಾದದ ನಡುವೆ ನಟ, ರಾಜಕಾರಣಿ ವಿಜಯ್ ಭಾನುವಾರ ಱಲಿ ನಡೆಸಿದ್ದಾರೆ. ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಮತ್ತು ಬಗ್ಗುವುದಿಲ್ಲ. ಇದು ಚುನಾವಣೆಗಾಗಿಯಲ್ಲ, ಪ್ರಜಾಪ್ರಭುತ್ವಕ್ಕಾಗಿನ ಯುದ್ಧ ಎಂದಿದ್ದಾರೆ.
ತಮಿಳುನಾಡಿನ ಮಾಮಲ್ಲಪುರಂನಲ್ಲಿ ರವಿವಾರ ನಡೆದ ಪಕ್ಷದ ಕಾರ್ಯತಂತ್ರದ ಸಭೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ವಿಜಯ್ ‘ಇದು ಕೇವಲ ಚುನಾವಣೆಯಲ್ಲ, ಬದಲಾಗಿ ಇದೊಂದು ಪ್ರಜಾಪ್ರಭುತ್ವದ ಯುದ್ಧ. ಈ ಯುದ್ಧವನ್ನು ಗೆಲ್ಲಲು ನೀವೇ ನನ್ನ ಕಮಾಂಡೋಗಳು’ ಎಂದು ಬೆಂಬಲಿಗರಲ್ಲಿ ಉತ್ಸಾಹ ತುಂಬಿದರು.
‘ಅಧಿಕಾರದಲ್ಲಿರುವ ಪಕ್ಷಗಳಿಗೆ ಮತಗಟ್ಟೆಗಳು ನಕಲಿ ಮತ ಕೇಂದ್ರಗಳಾಗಿವೆ. ಪ್ರತಿಯೊಂದು ಮತವನ್ನು ರಕ್ಷಿಸಿ, ಎಲ್ಲರನ್ನೂ ಭೇಟಿ ಮಾಡಿ. ದುಷ್ಟ ಶಕ್ತಿ (ಡಿಎಂಕೆ) ಮತ್ತು ಭ್ರಷ್ಟ ಶಕ್ತಿ (ಎಐಎಡಿಎಂಕೆ)ಯನ್ನು ಎದುರಿಸಲು ಟಿವಿಕೆಗೆ ಮಾತ್ರ ಧೈರ್ಯವಿದೆ’ ಎಂದರು.
ಆಡಳಿತಾರೂಢ ಡಿಎಂಕೆ ಮತ್ತು ವಿರೋಧ ಪಕ್ಷ ಎಐಎಡಿಎಂಕೆ ಎರಡನ್ನೂ ಗುರಿಯಾಗಿಸಿಕೊಂಡು ಅವರು ಮಾತನಾಡಿದರು. ‘ಇಂದಿನ ರಾಜಕಾರಣಿಗಳು ಅಣ್ಣಾದೊರೈ ಅವರನ್ನು ಮರೆತಿದ್ದಾರೆ. ತಮ್ಮ ಪಕ್ಷದ ಹೆಸರಿನಲ್ಲೇ ‘ಅಣ್ಣಾ’ ಎಂದು ಇಟ್ಟುಕೊಂಡವರೂ ಸಹ ಅವರ ಸಿದ್ಧಾಂತಗಳನ್ನು ಗಾಳಿಗೆ ತೂರಿದ್ದಾರೆ’ ಎಂದು ಟೀಕಿಸಿದರು.
ಇತ್ತೀಚೆಗೆ ರಾಜಕೀಯ ಕ್ಷೇತ್ರಕ್ಕೆ ಧುಮುಕಿರುವ 51 ವರ್ಷದ ನಟ ವಿಜಯ್, ಕಳೆದ ಕೆಲವು ತಿಂಗಳುಗಳಿಂದ ಸುದ್ದಿಯಲ್ಲಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ತಮಿಳುನಾಡಿನ ಕರೂರಿನಲ್ಲಿ ವಿಜಯ್ ಭಾಷಣ ಮಾಡಿದ ರ‍್ಯಾಲಿಯಲ್ಲಿ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿದ್ದರು. ಅದರ ತನಿಖೆ ನಡೆಯುತ್ತಿದೆ. ದೆಹಲಿಯಲ್ಲಿ ಎರಡು ಬಾರಿ ವಿಚಾರಣೆ ನಡೆದಿದೆ. ಈ ನಡುವೆ ವಿಜಯ್ ಅವರ ‘ಜನ ನಾಯಗನ್’ ಚಿತ್ರವನ್ನು ಎರಡು ಬಾರಿ ಸೆನ್ಸಾರ್ ಮಂಡಳಿಯು ನಿರ್ಬಂಧಿಸಿದ್ದು, ಸದ್ಯ ಈ ಸಿನಿಮಾವು ಸುದ್ದಿಯಲ್ಲಿದೆ. ಬಿಡುಗಡೆಗೆ ಅವಕಾಶ ನೀಡುವಂತೆ ನಟ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ವಿಜಯ್‌ಗೆ ಸೀಟಿ ಚಿಹ್ನೆ ಕೊಟ್ಟ ಆಯೋಗ
ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಕೇಂದ್ರ ಚುನಾವಣಾ ಆಯೋಗವು ಸೀಟಿ ಚಿಹ್ನೆಯನ್ನು ನೀಡಿದೆ. ಹಾಗೆಯೇ ನಟ ಕಮಲ್ ಹಾಸನ್ ಅವರ ಮಕ್ಕಳ್ ನೀದಿ ಮಯ್ಯಂ (ಎಂಎನ್‌ಎಂ) ಪಕ್ಷಕ್ಕೆ ಟಾರ್ಚ್ ಚಿಹ್ನೆಯನ್ನು ನೀಡಿದೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಮುಂಬರುವ ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಟಿವಿಕೆ ಹಾಗೂ ಎಂಎನ್‌ಎಂ ಪಕ್ಷಗಳಿಗೆ ಈ ಚಿಹ್ನೆ ನೀಡಲಾಗಿದೆ ಎಂದು ಆಯೋಗವು ಹೇಳಿದೆ.
ಇದನ್ನೂ ಓದಿ: ಕರೂರ್ ಕಾಲ್ತುಳಿತ ಕೇಸ್- ವಿಜಯ್ ರ‍್ಯಾಲಿಗೆ ಬಳಸಿದ್ದ ಬಸ್ ವಶಕ್ಕೆ ಪಡೆದ ಸಿಬಿಐ!