ತುಮಕೂರು : ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರ ಗ್ರಾಮದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಬಾಲಕಿಯರ ವಸತಿ ನಿಲಯ ಕಳೆದ 8 ವರ್ಷಗಳಿಂದ ಖಾಲಿಯಾಗಿ ಪಾಳು ಬಿದ್ದಿದೆ. ಗ್ರಾಮದಲ್ಲಿ ಹರಡಿರುವ ಮೌಢನಂಬಿಕೆಗಳ ಕಾರಣದಿಂದ ವಿದ್ಯಾರ್ಥಿನಿಯರು ಹಾಸ್ಟೆಲ್‌ಗೆ ಬರಲು ಹೆದರುತ್ತಿರುವುದರಿಂದ ಈ ಸ್ಥಿತಿ ಉಂಟಾಗಿದೆ ಎಂಬುದು ಬೆಳಕಿಗೆ ಬಂದಿದೆ.
ಜಿಲ್ಲಾ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆಯ ವಿಶೇಷ ಅನುದಾನದಲ್ಲಿ ಸುಮಾರು 69 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕಸ್ತೂರಿಬಾ ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಲಾಗಿತ್ತು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರಿಗೆ ಶಿಕ್ಷಣದ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ವಸತಿ ನಿಲಯವನ್ನು ನಿರ್ಮಿಸಿದ್ದರೂ, ಮೌಢ್ಯ ನಂಬಿಕೆಗಳ ಕಾರಣದಿಂದ ವಿದ್ಯಾರ್ಥಿನಿಯರು ಇಲ್ಲಿ ವಾಸಿಸಲು ಮುಂದೆ ಬರುತ್ತಿಲ್ಲ.
ವಿದ್ಯಾರ್ಥಿ ನಿಲಯದ ಸಮೀಪದಲ್ಲಿರುವ ಏಳೂಮಂದೆಮ್ಮ ದೇವಸ್ಥಾನಕ್ಕೆ ಸಂಬಂಧಿಸಿದ ನಂಬಿಕೆಗಳೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಮುಟ್ಟಾದ ವಿದ್ಯಾರ್ಥಿನಿಯರು ಅಥವಾ ಬಾಣಂತಿಯರು ಈ ಪ್ರದೇಶದಲ್ಲಿ ಸಂಚರಿಸಿದರೆ ದೇವಿ ಕೋಪಗೊಳ್ಳುತ್ತಾಳೆ ಎಂಬ ಭಯ ಗ್ರಾಮಸ್ಥರಲ್ಲಿ ಇದೆ ಎನ್ನಲಾಗಿದೆ. ಒಂದು ವೇಳೆ ಅಂಥವರು ಈ ಪ್ರದೇಶದಲ್ಲಿ ಸಂಚರಿಸಿದರೆ ಅನಾಹುತಗಳು ಸಂಭವಿಸಬಹುದು ಎಂಬ ನಂಬಿಕೆಯೂ ಕೆಲವರಲ್ಲಿ ಇದೆ.
ಈ ಕಾರಣದಿಂದ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಈ ವಿದ್ಯಾರ್ಥಿ ನಿಲಯಕ್ಕೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮದಲ್ಲಿ ಹಿಂದೂ ಹಾಗೂ ಮುಸ್ಲಿಂ ಮಹಿಳೆಯರು ಸಹ ಈ ಪ್ರದೇಶದಲ್ಲಿ ಸಂಚರಿಸಲು ಹೆದರುತ್ತಾರೆ ಎನ್ನಲಾಗಿದೆ.
ಮೌಢನಂಬಿಕೆ ನಿವಾರಣೆಗೆ ಶಿಕ್ಷಣ ಇಲಾಖೆ ಹಲವು ಬಾರಿ ಗ್ರಾಮದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರೂ ಗ್ರಾಮಸ್ಥರ ಮನಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಕೆಲವರು ವಿದ್ಯಾರ್ಥಿ ನಿಲಯವನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸುತ್ತಿರುವುದರಿಂದ ಶಿಕ್ಷಣ ಇಲಾಖೆಗೆ ತಲೆನೋವಾಗಿದ್ದು, ವಸತಿ ನಿಲಯ 8 ವರ್ಷಗಳಿಂದ ಖಾಲಿಯೇ ಉಳಿದಿದೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಕ್ಷೇತ್ರದಲ್ಲೇ ಇಂತಹ ಮೌಢನಂಬಿಕೆ ಮುಂದುವರಿದಿರುವುದು ಚರ್ಚೆಗೆ ಕಾರಣವಾಗಿದೆ. ಒಂದು ಕಡೆ ಸರ್ಕಾರ ಶಿಕ್ಷಣ ಹಾಗೂ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದ್ದರೆ, ಮತ್ತೊಂದು ಕಡೆ ಮೌಢ್ಯ ನಂಬಿಕೆಗಳು ಅಭಿವೃದ್ಧಿಗೆ ಅಡ್ಡಿಯಾಗುತ್ತಿರುವುದು ಸ್ಪಷ್ಟವಾಗುತ್ತಿದೆ.