ತನ್ನನ್ನು ಮಂಗಳವಾರ ಬಂಧಿಸುವ ಸಾಧ್ಯತೆ ಇದ್ದು, ದೇಶಾದ್ಯಂತ ರಿಪಬ್ಲಿಕ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಬೇಕು ಎಂದು ಅಮೇರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದಾರೆ. ಪೋರ್ನ್ ಸಿನಿಮಾಗಳ ನಟಿ ಸ್ಟಾರ್ಮಿ ಡೇನಿಯಲ್ಸ್ ಜೊತೆ ಡೊನಾಲ್ಡ್ ಟ್ರಂಪ್ ಅಕ್ರಮವಾಗಿ ಹಣಕಾಸಿನ ವಹಿವಾಟು ಹೊಂದಿದ್ದಾರೆ ಎಂಬ ಆರೋಪವಿದ್ದು, ಈ ಪ್ರಕರಣದ ಬಗ್ಗೆ ವಿಚಾರಣೆ ಸಹ ನಡೆಯುತ್ತಿದೆ. ನ್ಯೂಯಾರ್ಕ್ ನ ಮ್ಯಾನ್ ಹಟನ್ ಜಿಲ್ಲಾ ಸಮಿತಿಯು ಅಟಾರ್ನಿ ಆಲ್ವಿನ್ ಬ್ರಾಗ್ ಎಂಬ ಅಧಿಕಾರಿಯ ನೇತೃತ್ವದಲ್ಲಿ ನಡೆಸುತ್ತಿರುವ ಈ ತನಿಖೆಯ ಮಾಹಿತಿ ಸೋರಿಕೆಯಾಗಿದ್ದು ಅದರ ಪ್ರಕಾರ ತಾನು ಮಂಗಳವಾರ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.
ಈ ಬಗ್ಗೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಈ-ಮೇಲ್ ರವಾನಿಸಿರುವ ಡೊನಾಲ್ಡ್ ಟ್ರಂಪ್, ದೇಶಾದ್ಯಂತ ಈ ಕೃತ್ಯವನ್ನು ಖಂಡಿಸಬೇಕು. ಪ್ರತಿಭಟನೆಗೆ ಹಣ ಸಂಗ್ರಹಿಸಬೇಕು ಎಂದು ಹೇಳಿದ್ದಾರೆ. ಜೊತೆಗೆ ರಿಪಬ್ಲಿಕ್ ಪಕ್ಷದ ಮುಖಂಡರು ತಮ್ಮ ಪರವಾಗಿ ಹೇಳಿಕೆ ನೀಡಬೇಕು ಎಂದು ಟ್ರಂಪ್ ಒತ್ತಾಯಿಸಿದ್ದಾರೆ.
ಆದರೆ ಇದುವರೆಗೂ ಡೊನಾಲ್ಡ್ ಟ್ರಂಪ್ ಅವರ ಬಂಧನದ ಬಗ್ಗೆ ಯಾವುದೇ ಮಾತುಕತೆಯಾಗಲೀ, ಮಾಹಿತಿ ವಿನಮಯವಾಗಲೀ ನಡೆದಿಲ್ಲ ಎಂದು ಅವರ ವಕೀಲರು ಸ್ಪಷ್ಟಪಡಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಯಾಗಲಿರುವ ತನ್ನನ್ನು ಜೈಲಿಗೆ ಕಳಿಸಲು ಸಂಚು ನಡೆದಿದೆ ಎಂದು ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.