Thursday, July 16, 2026
Homeಟಾಪ್ ನ್ಯೂಸ್BELAGAVI: ಎರಡು ದಿನಗಳಿಂದ ನಿರಂತರ ಮಳೆಯ ಆರ್ಭಟಕ್ಕೆ ಕುಸಿದ ಮನೆಯ ಗೋಡೆ!

BELAGAVI: ಎರಡು ದಿನಗಳಿಂದ ನಿರಂತರ ಮಳೆಯ ಆರ್ಭಟಕ್ಕೆ ಕುಸಿದ ಮನೆಯ ಗೋಡೆ!

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಾದ್ಯಂತ (Belagavi) ಮಳೆರಾಯನ ಅಬ್ಬರ ಜೋರಾಗಿದ್ದು, ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆ (Tragedy) ಗೋಡೆಯೊಂದು ಕುಸಿದು ಬಿದ್ದ ಘಟನೆ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ನಿವಾಸಿ ಗಂಗವ್ವ ವರಾಳೆ ಎಂಬುವವರಿಗೆ ಸೇರಿದ ಮನೆಯ ಗೋಡೆ ಏಕಾಏಕಿ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ ಏಳು ಮಂದಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮನೆಯಿಂದ ಓಡಿ ಬಂದ ಕುಟುಂಬಸ್ಥರು
ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಗಂಗವ್ವ ಅವರ ಮನೆ ಸಂಪೂರ್ಣವಾಗಿ ತೇವಗೊಂಡು ದುರ್ಬಲವಾಗಿತ್ತು. ತಡರಾತ್ರಿ ಮನೆಯ ಗೋಡೆ ಕುಸಿಯುವ ಭೀಕರ ಶಬ್ದ ಕೇಳಿಸುತ್ತಿದ್ದಂತೆಯೇ ಎಚ್ಚೆತ್ತ ಕುಟುಂಬಸ್ಥರು ತಕ್ಷಣವೇ ಸಮಯಪ್ರಜ್ಞೆ ಮೆರೆದು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಅವರು ಹೊರಬಂದ ಕೆಲವೇ ಕ್ಷಣಗಳಲ್ಲಿ ಗೋಡೆ ಸಂಪೂರ್ಣವಾಗಿ ನೆಲಸಮವಾಗಿದೆ. ಒಂದು ವೇಳೆ ಮನೆಯವರು ಹೊರಬರಲು ತಡಮಾಡಿದ್ದರೆ ದೊಡ್ಡ ಮಟ್ಟದ ಪ್ರಾಣಹಾನಿ ಸಂಭವಿಸುವ ಸಾಧ್ಯತೆಯಿತ್ತು. ಸದ್ಯ ಯಾವುದೇ ಅನಾಹುತವಿಲ್ಲದೆ ಕುಟುಂಬದ ಏಳೂ ಸದಸ್ಯರು ಜೀವ ಉಳಿಸಿಕೊಂಡಿರುವುದು ನಿಟ್ಟುಸಿರು ಬಿಡುವಂತೆ ಮಾಡಿದೆ.

ಆದರೆ, ತಲೆಮರೆಸಿಕೊಳ್ಳಲು ಇದ್ದ ಹಳೇ ಮನೆಯ ಗೋಡೆ ಸಂಪೂರ್ಣವಾಗಿ ಧರಾಶಾಹಿಯಾಗಿರುವುದರಿಂದ ಗಂಗವ್ವ ಅವರ ಕುಟುಂಬಸ್ಥರು ಈಗ ವಾಸಿಸಲು ನೆಲೆ ಇಲ್ಲದೆ ಬೀದಿಗೆ ಬಿದ್ದಂತಾಗಿದೆ. ಇದ್ದ ಒಂದೇ ಒಂದು ಆಸರೆಯೂ ಮಳೆಗೆ ಆಹುತಿಯಾಗಿದ್ದರಿಂದ ಸಂತ್ರಸ್ತ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ನೆರೆಹೊರೆಯವರ ಮನ ಕರಗಿಸುವಂತಿತ್ತು. ಸದ್ಯ ಸ್ಥಳೀಯರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಘಟನೆ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜ್ಯದಲ್ಲಿ ಮಳೆಯ ಭರವಸೆ : ಜುಲೈ 5 ರಿಂದ 8 ರವರೆಗೆ ಭಾರೀ ವರ್ಷಧಾರೆ ಸಾಧ್ಯತೆ

ರಾಜ್ಯದಲ್ಲಿ (karnataka ) ಕೆಲ ದಿನಗಳಿಂದ ಮರೀಚಿಕೆಯಾಗಿದ್ದ ಮುಂಗಾರು ಮಳೆ (Rain ) ಈಗ ಅಬ್ಬರ ಶುರುಮಾಡುವ ಭರವಸೆ ಮೂಡಿಸಿದೆ. ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯ ಪ್ರಕಾರ, ಜುಲೈ 5 ರಿಂದ ಜುಲೈ 8 ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.

ಕರಾವಳಿ ಮತ್ತು ಮಲೆನಾಡು ಭಾಗದ ಹಲವು ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ.
ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.

ಈ ಹಿನ್ನೆಲೆಯಲ್ಲಿ ಕರಾವಳಿಯ ಈ ಮೂರು ಪ್ರಮುಖ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಕಡ್ಡಾಯವಾಗಿ ಆರೆಂಜ್ ಅಲರ್ಟ್ ಘೋಷಿಸಿದೆ.

ಹಾಗೆಯೇ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ನಿರಂತರ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಇದರೊಂದಿಗೆ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಿಗೂ ಮುಂದಿನ ಎರಡು ದಿನಗಳ ಕಾಲ ಹಳದಿ (ಯೆಲ್ಲೋ) ಅಲರ್ಟ್ ನೀಡಲಾಗಿದ್ದು, ನದಿ ತೀರದ ಜನರಿಗೆ ಮುನ್ನೆಚ್ಚರಿಕೆ ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ರಾಜ್ಯದ ಘಟ್ಟ ಪ್ರದೇಶಗಳಲ್ಲಿ ಜುಲೈ 5 ರಿಂದ 9 ರವರೆಗೆ ಭೂಕುಸಿತ ಸಂಭವಿಸುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (KSNDMC) ಮುನ್ನೆಚ್ಚರಿಕೆ ನೀಡಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿದಂತೆ ಉಳಿದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಸಾರ್ವಜನಿಕರು ಮತ್ತು ಪ್ರವಾಸಿಗರು ಸುರಕ್ಷಿತವಾಗಿರಲು ಕೋರಲಾಗಿದೆ.

ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಬೀದರ್ ಯುವಕನ ಅನುಮಾನಾಸ್ಪದ ಸಾ*ವು!

ಹೆಚ್ಚಿನ ಸುದ್ದಿ

Change Language »
error: Content is protected !!