Thursday, March 12, 2026
Homeಕ್ರೈಂTRAGEDY: ಹಿರಿಯೂರು-ಮೈಸೂರು; ಕರಾಳ ಕ್ರಿಸ್ಮಸ್..! ಹಬ್ಬದ ಸಂಭ್ರಮವನ್ನೇ ಕಸಿದ ಸಾ*ವು-ನೋವುಗಳು!

TRAGEDY: ಹಿರಿಯೂರು-ಮೈಸೂರು; ಕರಾಳ ಕ್ರಿಸ್ಮಸ್..! ಹಬ್ಬದ ಸಂಭ್ರಮವನ್ನೇ ಕಸಿದ ಸಾ*ವು-ನೋವುಗಳು!

ಬೆಂಗಳೂರು: ಇಂದು ಗುರುವಾರ (Thursday) ಕರಾಳ ದಿನವಾಗಿ ಬದಲಾಗಿದೆ. ಕ್ರಿಸ್ಮಸ್‌ (Christmas) ಹಬ್ಬದ ದಿನದಂದೇ ರಾಜ್ಯ ಹಾಗೂ ದೇಶದಲ್ಲಿ ಹಲವು ಅವಘಡಗಳು (Accident) ನಡೆದಿದ್ದು, ಹಲವು ಪ್ರಾಣ ಕಳೆದುಕೊಂಡಿದ್ದಾರೆ. ಚಿತ್ರದುರ್ಗ ಹಾಗೂ ತಮಿಳುನಾಡಿನಲ್ಲಿ ನಡೆದ ಭೀಕರ ದುರಂತವು ಹಬ್ಬದ ಸಂಭ್ರಮವನ್ನು ಕಸಿದುಕೊಂಡಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದ್ದು, ದುರಂತದಲ್ಲಿ 8ಕ್ಕೂ ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಗೊರ್ಲತ್ತು ಗ್ರಾಮದ ಬಳಿ ಸೀಬರ್ಡ್ ಸ್ಲೀಪರ್ ಕೋಚ್ ಬಸ್ ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಬೆಂಕಿ ಹೊತ್ತಿ ಉರಿದ ಪರಿಣಾಮ 8 ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ. ಹಲವರು ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಸ್ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿತ್ತು ಎನ್ನಲಾಗಿದೆ.

ಮೈಸೂರು ಅರಮನೆ ಮುಂಭಾಗ ಘೋರ ದುರಂತ!

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ವಿಶ್ವವಿಖ್ಯಾತ ಅರಮನೆಯ  ಮುಂಭಾಗದಲ್ಲೇ ಇಂದು (ಡಿ.25) ಭೀಕರ ಅವಘಡ ಸಂಭವಿಸಿದೆ. ಬಲೂನ್ ಗಳಿಗೆ ತುಂಬಿಸುವ ನೈಟ್ರೋಜನ್ ಗ್ಯಾಸ್  ಸ್ಫೋಟಗೊಂಡ ಪರಿಣಾಮ ಇಬ್ಬರ ದೇಹ ಛಿದ್ರ ಛಿದ್ರಗೊಂಡಿದೆ.

ಹೌದು ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಆವರಣದಲ್ಲಿ ಬಲೂನುಗಳಿಗೆ ನೈಟ್ರೋಜನ್ ಗ್ಯಾಸ್ ತುಂಬಿಸುತ್ತಿದ್ದ ವೇಳೆ ಈ ಸ್ಪೋಟ ಉಂಟಾಗಿದೆ.ಈ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದರೇ, ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಂಭೀರ ಗಾಯಗಳಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ

ಸದ್ಯ ಗಾಯಾಳುಗನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಈ ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಕೃಷ್ಣರಾಜ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿದ್ದಾರೆ.

ಕಾರು ಪಲ್ಟಿಯಾಗಿ ಒಂದೇ ಕುಟುಂಬದ ಮೂವರು ದುರ್ಮ*ರಣ

ಬಳ್ಳಾರಿ: ಕ್ರಿಸ್ಮಸ್‌ ಹಬ್ಬದಂದೇ ರಾಜ್ಯದಲ್ಲಿ ಸಾಲುಸಾಲು ದುರಂತ ಘಟನೆಗಳು ಜನತೆಯನ್ನು ಬೆಚ್ಚಿ ಬೀಳಿಸಿದೆ. ಬಳ್ಳಾರಿ (Ballary) ಜಿಲ್ಲೆಯ ಸಿರಗುಪ್ಪ (Siraguppa) ತಾಲೂಕಿನಲ್ಲಿ ಕಾರು ಪಲ್ಟಿಯಾಗಿ (Car Overturned) ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ.

ತಾಲೂಕಿನ ದೇವಿನಗರ ಕ್ಯಾಂಪ್ ಬಳಿ ಈ ಅಪಘಾತ ಸಂಭವಿಸಿದೆ. ವೇಗವಾಗಿ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಕಟ್ಟೆಯೊಂದಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ವರದಿಗಳ ಪ್ರಕಾರ ಒಂದೇ ಕುಟುಂಬದ ಐವರು ತಮಿಳುನಾಡಿನ ದೇವಸ್ಥಾನಕ್ಕೆ ತೆರಳಿ ವಾಪಸ್ ಬರುವಾಗ ಈ ಅಪಘಾತ ಸಂಭವಿಸಿದೆ. ಬುಧವಾರ ಬೆಳಗ್ಗಿನ ಜಾವ 5 ಗಂಟೆಗೆ ಈ ಅಪಘಾತ ಸಂಭವಿಸಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ವಿವರಗಳು ಇನ್ನೂ ತಿಳಿದು ಬಂದಿಲ್ಲ.

ತಮಿಳುನಾಡಿನಲ್ಲೂ ಭೀಕರ ಅಪಘಾತ: ಚಿತ್ರದುರ್ಗದಲ್ಲಿ ಸಂಭವಿಸಿದ ಭೀಕರ ಬಸ್ ದುರಂತ ರಾಜ್ಯದ ಜನತೆಯನ್ನೇ ಬೆಚ್ಚಿ ಬೀಳಿಸಿದೆ. ಇದೇ ಸಂದರ್ಭ ತಮಿಳುನಾಡಿನಲ್ಲೂ ಭೀಕರ ಬಸ್ ಅಪಘಾತ ಸಂಭವಿಸಿ 9 ಜನರ ಸಾವಾಗಿರುವ ಘಟನೆ ನಡೆದಿದೆ. ತಮಿಳುನಾಡಿನ ತಿರುಚಿಯಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದ ರಾಜ್ಯ ಎಕ್ಸ್‌ಪ್ರೆಸ್‌ ಸಾರಿಗೆ ನಿಗಮ (SETC) ಬಸ್ ಬುಧವಾರ ರಾತ್ರಿ ಕಡಲೂರು ಜಿಲ್ಲೆಯ ಎಳುತೂರ್ ಬಳಿ ಭೀಕರ ಅಪಘಾತಕ್ಕೀಡಾಗಿದ್ದು ಕನಿಷ್ಠ9 ಜನರು ಸಾವನ್ನಪ್ಪಿದ್ದಾರೆ. 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಟೈರ್ ಪಂಚರ್ ಆದ ಬಳಿಕ ಬಸ್ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಮೊದಲು ಡಿಕ್ಕಿ ಹೊಡೆದಿದೆ. ಬಳಿಕ ತಡೆಗೋಡೆಯನ್ನು ಭೇದಿಸಿ, ಎದುರಿನ ಕ್ಯಾರೇಜ್‌ವೇಗೆ ದಾಟಿದೆ. ಅಲ್ಲಿ ಇನ್ನೊಂದು ದಿಕ್ಕಿನಿಂದ ಬರುತ್ತಿದ್ದ ಎರಡು ಕಾರುಗಳಿಗೆ ಬಸ್‌ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಭೀಕರವಾಗಿದ್ದು, ಕಾರುಗಳಲ್ಲಿ ಪ್ರಯಾಣಿಸುತ್ತಿದ್ದ 7 ಜನ ಸೇರಿ ಒಟ್ಟು 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತಕ್ಕೊಳಗಾದ ಎರಡು ಕಾರುಗಳು ನಜ್ಜುಗುಜ್ಜಾಗಿವೆ. ಇನ್ನೂ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಹತ್ತಿರದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಬಾಂಗ್ಲಾದಲ್ಲಿ ನಿಲ್ಲದ ಹಿಂಸಾಚಾರ, ಮತ್ತೋರ್ವ ಹಿಂದೂ ಯುವಕ ಹ*ತ್ಯೆ

ಮುಳ್ಳಯ್ಯನಗಿರಿಯಲ್ಲಿ ಜೀಪ್‌ ಪಲ್ಟಿ: ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ತಿರುವಿನಲ್ಲಿ ಪ್ರವಾಸಿಗರ ಜೀಪ್ ಪಲ್ಟಿಯಾದ ಪರಿಣಾಮ 7 ಮಂದಿ ಪ್ರವಾಸಿಗರು ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.

ಬಾಬಾಬುಡನ್ ಸ್ವಾಮಿ ದರ್ಗಾಗೆ ಬಂದಿದ್ದಂತ ಜೀಪ್ ಪಲ್ಟಿಯಾಗಿದೆ. ಪುತ್ತೂರಿನಿಂದ ಜೀಪ್‌ನಲ್ಲಿ ಪ್ರವಾಸಕ್ಕೆ 7 ಮಂದಿ ಬಂದಿದ್ದರು. ಮುಳ್ಳಯ್ಯನಗಿರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಟಿಯಾಗಿದೆ. ಕೂಡಲೇ ಗಾಯಾಳುಗಳನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರೈಲು ಡಿಕ್ಕಿಯಾಗಿ ಐವರು ಸಾವು: ಇತ್ತ ಉತ್ತರ ಪ್ರದೇಶದ ಶಹಜಹಾನ್ಸುರದಲ್ಲಿ ರೈಲು ದುರಂತ ಸಂಭವಿಸಿದ್ದು, ಐವರು ಸಾವನ್ನಪ್ಪಿದ್ದಾರೆ. ರೈಲು ಹಳಿಯನ್ನು ದಾಟುತ್ತಿದ್ದಾಗ ನಡೆದ ಅಪಘಾತದಲ್ಲಿ ಈ ಘಟನೆ ನಡೆದಿದ್ದು ರೌಜಾ ಪೊಲೀಸ್ ಠಾಣಾ ವ್ಯಾಪ್ತಿಯ ರೌಜಾ ರೈಲ್ವೆ ನಿಲ್ದಾಣದ ಬಳಿಯೇ ದುರಂತ ಸಂಭವಿಸಿದೆ.

ಮೃತರನ್ನು ಸೇರ್ ಪಾಲ್ (40), ಅವರ ಪತ್ನಿ ಪೂಜಾ (38), ನಾಲ್ಕು ಮತ್ತು ಆರು ವರ್ಷದ ಇಬ್ಬರು ಮಕ್ಕಳು ಮತ್ತು ಸೇರ್ ಪಾಲ್ ಅವರ ಸೋದರ ಮಾವ ಹರಿ ಓಂ (45) ಎಂದು ಗುರುತಿಸಲಾಗಿದೆ. ಎಲ್ಲರೂ ಲಖಿಂಪುರ ಜಿಲ್ಲೆಯ ವಂಕಾ ಗ್ರಾಮದ ನಿವಾಸಿಗಳು. ಒಂದೇ ಮೋಟಾರ್ ಸೈಕಲ್‌ನಲ್ಲಿ ಸವಾರಿ ಹೊರಟಿದ್ದ ಐವರು ಬೈಕ್‌ನಲ್ಲಿ ಹಳಿ ದಾಟುವ ಪ್ರಯತ್ನ ಮಾಡಿದ್ದಾರೆ. ಬುಧವಾರ ಸಂಜೆ 6.30ಕ್ಕೆ ಲಕ್ನೋ ದಿಕ್ಕಿನಿಂದ ಬರುತ್ತಿದ್ದ ಪ್ರಯಾಣಿಕರ ರೈಲು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ದ್ವಿವೇದಿ ತಿಳಿಸಿದ್ದಾರೆ.

ಪ್ರಾಧ್ಯಾಪಕನ ಹ*ತ್ಯೆ! : ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರಾಧ್ಯಾಪಕನ ಹತ್ಯೆ ನಡೆದಿದೆ. ಉತ್ತರಪ್ರದೇಶದ ವಿವಿಯ ಎಬಿಕೆ ಪ್ರೌಢಶಾಲೆಯ ಕಂಪ್ಯೂಟರ್ ವಿಜ್ಞಾನ ಶಿಕ್ಷಕ ಡ್ಯಾನಿಶ್ ರಾವ್ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಅವರು ಇಬ್ಬರು ಸಹೋದ್ಯೋಗಿಗಳೊಂದಿಗೆ ವಾಕಿಂಗ್‌ಗೆ ಹೋಗುತ್ತಿರುವಾಗ ಸ್ಕೂಟರ್ ನಲ್ಲಿ ಬಂದ ಇಬ್ಬರು ಆಗಂತುಕರು ಅವರನ್ನು ತಡೆದು ಕನಿಷ್ಠ ಮೂರು ಬಾರಿ ತಲೆಗೆ ಗುಂಡು ಹಾರಿಸಿದರು ಎಂದು ಹಿರಿಯ ಪೊಲೀಸ್‌ ಅಧಿಕಾರಿಯು ತಿಳಿಸಿದ್ದಾರೆ.‌

ನವವಿವಾಹಿತೆ ಆತ್ಮಹತ್ಯೆ: ಮದುವೆಯಾಗಿ ತಿಂಗಳು ಕಳೆಯುವುದರ ಒಳಗೆಯೇ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಶಾಕಿಂಗ್ ಘಟನೆ ನೆಲಮಂಗಲದಲ್ಲಿ ನಡೆದಿದೆ. ಮೃತ ಮಹಿಳೆಯ ಪೋಷಕರು ಆಕೆಯ ಗಂಡನೇ ಹತ್ಯೆ ಮಾಡಿರುವುದಾಗಿ ಆರೋಪಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಐಶ್ವರ್ಯಾ (26) ಎಂದು ಗುರುತಿಸಲಾಗಿದೆ.

ಕೇವಲ 27 ದಿನಗಳ ಹಿಂದೆಯಷ್ಟೇ ಐಶ್ವರ್ಯಾ ಹಾಗೂ ಲಿಖಿತ್‌ ಸಿಂಹ ಮದುವೆ ನಡೆದಿತ್ತು. ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ಮದುವೆ ನಡೆದಿತ್ತಾದರೂ ಮದುವೆಯಾಗಿ ಕೆಲವೇ ದಿನಗಳಲ್ಲಿ ಐಶ್ವರ್ಯಾಗೆ ಗಂಡನ ಮನೆಯಲ್ಲಿ ಕುರುಕುಳ ನೀಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಇದೇ ವಿಚಾರವಾಗಿ ನಿನ್ನೆ ಬೆಳಗ್ಗೆ ಕುಟುಂಬಸ್ಥರು ರಾಜಿ ಪಂಚಾಯ್ತಿ ಮಾಡಿದ್ದರು. ಈ ನಡುವೆ ಐಶ್ವರ್ಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐಶ್ವರ್ಯ ಪತಿ ಲಿಖತ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!