ಬೆಂಗಳೂರು: ಚುನಾವಣೆಗೆ ಸಜ್ಜಾಗುತ್ತಿರುವ ಕರ್ನಾಟಕಕ್ಕೆ ಮೇಲಿಂದ ಮೇಲೆ ಕೇಂದ್ರ ನಾಯಕರು ಆಗಮಿಸುತ್ತಿದ್ದಾರೆ . ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಕೇಂದ್ರದ ನಾಯಕರು ರಾಜ್ಯಕ್ಕಾಗಮಿಸುತ್ತಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.
ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿನಲ್ಲಿ ಕೆಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಬೆಳಿಗ್ಗೆ ಬೀದರ್, ರಾಯಚೂರಿಗೆ ಭೇಟಿ ನೀಡಲಿರುವ ಅಮಿತ್ ಶಾ. ಬಳಿಕ ಸಂಜೆ ಬೆಂಗಳೂರಿಗೆ ಆಗಮಿಸಲಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಮತ್ತು ಲಿಂಗಾಯತ ಸಮಾಜ ಸುಧಾರಕ ಬಸವೇಶ್ವರ ಸೇರಿದಂತೆ ಮೂರು ಪ್ರತಿಮೆಗಳನ್ನು ಅಮಿತ್ ಶಾ ಅನಾವರಣಗೊಳಿಸಲಿದ್ದಾರೆ. ಸಂಜೆ 5 ಗಂಟೆಗೆ ಬೆಂಗಳೂರಿಗೆ ಆಗಮಿಸಲಿರುವ ಅಮಿತ್ ಶಾ, ರೇಸ್ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಲಾಗಿರುವ ಗುಜರಾತಿ ಸಮಾಜದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಸಂಜೆ 6.30ಕ್ಕೆ ವಿಧಾನಸೌಧದ ಮುಂದೆ ನಿರ್ಮಿಸಿರುವ ಬಸವೇಶ್ವರ, ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ತದನಂತರ ಬೆಂಗಳೂರು ಹಬ್ಬ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ರಾತ್ರಿ 8.30ಕ್ಕೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿ, ಖಾಸಗಿ ಹೋಟೆಲ್ನಲ್ಲಿ ಅಮಿತ್ ಶಾ ವಾಸ್ತವ್ಯ ಹೂಡಲಿದ್ದಾರೆ.
ಈ ರಸ್ತೆಗಳಲ್ಲಿ ಟ್ರಾಫಿಕ್ ವ್ಯತ್ಯಯ ಸಾಧ್ಯತೆ
ಅಮಿತ್ ಶಾ ಆಗಮಿಸಿತ್ತಿರುವುದರಿಂದ ಕೆಲ ರಸ್ತೆಗಳಲ್ಲಿ ಸಂಚಾರ ವ್ಯತ್ಯಯವಾಗಲಿದೆ. ಬಳ್ಳಾರಿ ರಸ್ತೆ, ಹೆಬ್ಬಾಳ ಸರ್ಕಲ್, ಮೇಖ್ರಿ ಸರ್ಕಲ್, ಕಾವೇರಿ ಜಂಕ್ಷನ್, ರಾಜಭವನ ರಸ್ತೆ, ಇನ್ ಫೆಂಟ್ರಿ ರಸ್ತೆ, ನೃಪತುಂಗ ರಸ್ತೆ, ಕ್ವೀನ್ಸ್ ರಸ್ತೆ, ಕೆ.ಆರ್ ಸರ್ಕಲ್, ಹಡ್ಸನ್ ಸರ್ಕಲ್, ಹಳೆ ಏರ್ಪೋರ್ಟ್ ರಸ್ತೆ, ಟ್ರಿನಿಟಿ ಸರ್ಕಲ್ ಹಾಗೂ ಟೌನ್ ಹಾಲ್ ಸುತ್ತಮುತ್ತ ಟ್ರಾಫಿಕ್ ವ್ಯತ್ಯಯವಾಗುವ ಸಾಧ್ಯತೆ ಇದ್ದು ಪರ್ಯಾಯ ಮಾರ್ಗ ಬಳಸಲು ಪೊಲೀಸರು ಜನರಲ್ಲಿ ಮನವಿ ಮಾಡಿದ್ದಾರೆ.