ಸ್ಯಾಂಡಲ್‌ವುಡ್ (Sandalwood) ಅಂಗಳದಿಂದ ಜಾಗತಿಕ ಮಟ್ಟಕ್ಕೆ ಸದ್ದು ಮಾಡಲು ಸಜ್ಜಾಗುತ್ತಿರುವ ರಾಕಿಂಗ್ ಸ್ಟಾರ್ ಯಶ್ (Actor Yash) ಅಭಿನಯದ ‘ಟಾಕ್ಸಿಕ್’ (Toxic) ಸಿನಿಮಾದ ಮೊದಲ ವಿಡಿಯೋ ಸಾಂಗ್ ‘ತಬಾಹಿ’ ಇಂದು ಅಧಿಕೃತವಾಗಿ ಇಂಟರ್ನೆಟ್‌ಗೆ ಅಪ್ಪಳಿಸಿದೆ.
ಮೊದಲ ಬಾರಿ ಯಶ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿರುವ ಬಾಲಿವುಡ್‌ನ ಹಸೀನೆ ಕಿಯಾರಾ ಅಡ್ವಾಣಿ ಹಾಗೂ ರಾಕಿ ಭಾಯ್ ನಡುವಿನ ಅದ್ಭುತ ಕೆಮಿಸ್ಟ್ರಿ ಇಡೀ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಹಾಡಿನಲ್ಲಿ ಇವರಿಬ್ಬರ ಬೋಲ್ಡ್ ಲುಕ್ ಕಂಡ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಬೆಳಗ್ಗೆ 11.33ಕ್ಕೆ ಸರಿಯಾಗಿ ಬಿಡುಗಡೆಯಾದ ಈ ಹಾಡಿನ ಪ್ರತಿಯೊಂದು ಫ್ರೇಮ್ ಕೂಡ ಪ್ರೇಕ್ಷಕರಿಗೆ ಕಣ್ಣಿನ ಹಬ್ಬದಂತಿದೆ. ಮಳೆಯ ಹಿನ್ನೆಲೆ ಹಾಗೂ ಕಣ್ಮನ ಸೆಳೆಯುವ ಕಡಲತೀರದಲ್ಲಿ ಚಿತ್ರೀಕರಿಸಲಾದ ಈ ರೊಮ್ಯಾಂಟಿಕ್ ಹಾಡಿನಲ್ಲಿ ಕಿಯಾರಾ ಅಡ್ವಾಣಿ ಅವರ ಗ್ಲಾಮರ್ ಜಾದೂ ಒಂದೆಡೆಯಾದರೆ, ಯಶ್ ಅವರ ರಗಡ್ ಲುಕ್ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ.
ಚಿತ್ರದಲ್ಲಿ ಯಶ್ ‘ರಾಯ’ ಎಂಬ ಖಡಕ್ ಪಾತ್ರಕ್ಕೆ ಬಣ್ಣ ಹಚ್ಚಿದ್ದರೆ, ಕಿಯಾರಾ ‘ರುಮಿ’ ಎಂಬ ಲವಲವಿಕೆಯ ಯುವತಿಯಾಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಹೊಸ ಜೋಡಿ ಬೆಳ್ಳಿತೆರೆಯ ಮೇಲೆ ಮ್ಯಾಜಿಕ್ ಮಾಡಲಿದೆ ಎಂಬುದಕ್ಕೆ ಈ ಹಾಡೇ ದಿಕ್ಸೂಚಿಯಾಗಿದೆ.
ಗೀತು ಮೋಹನ್ ದಾಸ್ ನಿರ್ದೇಶನದ ಬಿಗ್ ಬಜೆಟ್ ಆ್ಯಕ್ಷನ್ ಧಮಾಕಾ
ರಾಷ್ಟ್ರ ಪ್ರಶಸ್ತಿ ವಿಜೇತ ಮಹಿಳಾ ನಿರ್ದೇಶಕಿ ಗೀತು ಮೋಹನ್ ದಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಬಿಗ್ ಬಜೆಟ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಪ್ರಚಾರದ ಮೊದಲ ಹಂತದಲ್ಲೇ ಅಬ್ಬರಿಸುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ಅತ್ಯಂತ ಅದ್ದೂರಿಯಾಗಿ ಜಂಟಿಯಾಗಿ ಈ ಚಿತ್ರವನ್ನು ಹೂಡಿಕೆ ಮಾಡಿವೆ.
ವಿಶೇಷವೆಂದರೆ, ಈ ಸಿನಿಮಾ ಮೂಲತಃ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿದ್ದು, ಭಾರತೀಯ ಚಿತ್ರರಂಗದಲ್ಲೇ ಸದ್ಯಕ್ಕೆ ಭಾರಿ ಕುತೂಹಲ ಕೆರಳಿಸಿರುವ ಪ್ಯಾನ್ ವರ್ಲ್ಡ್ ಪ್ರಾಜೆಕ್ಟ್ ಆಗಿದೆ.
ಇದೇ ಆಗಸ್ಟ್ 26ರಂದು ವಿಶ್ವಾದ್ಯಂತ ‘ಟಾಕ್ಸಿಕ್’ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಕನ್ನಡ ಹಾಗೂ ಇಂಗ್ಲಿಷ್ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಿಗೂ ಡಬ್ ಆಗಿ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಸದ್ಯ ಬಿಡುಗಡೆಯಾಗಿರುವ ‘ತಬಾಹಿ’ ಹಾಡು ಯೂಟ್ಯೂಬ್‌ನಲ್ಲಿ ವೀಕ್ಷಣೆಯ ಹೊಸ ದಾಖಲೆ ಬರೆಯುವತ್ತ ಮುನ್ನುಗ್ಗುತ್ತಿದ್ದು, ಗಾಂಧಿನಗರದ ಬಾಕ್ಸ್ ಆಫೀಸ್ ಲೆಕ್ಕಾಚಾರಗಳನ್ನು ಉಲ್ಟಾ ಪಲ್ಟಾ ಮಾಡುವುದು ಗ್ಯಾರಂಟಿ ಎನ್ನುತ್ತಿದ್ದಾರೆ ಸಿನಿ ಪಂಡಿತರು.