ಆಂಧ್ರಪ್ರದೇಶ : ಬುಚ್ಚಿಬಾಬು ಸನಾ ನಿರ್ದೇಶನದ, ರಾಮ್ ಚರಣ್ (Ram charan) ಮತ್ತು ಜಾನ್ವಿ ಕಪೂರ್ (Jahnvi Kapoor) ನಟನೆಯ ಚಿತ್ರ ‘ಪೆದ್ದಿ’ (Peddi) ಸಿನಿಮಾ ಜೂನ್ ತಿಂಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಪ್ರಚಾರದ ಸಲುವಾಗಿ ವಿಜಯವಾಡದಲ್ಲಿ ಭವ್ಯವಾದ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ವೇದಿಕೆಯ ಮೇಲೆ ಚಿತ್ರತಂಡದ ಪ್ರಮುಖರು ಉಪಸ್ಥಿತರಿದ್ದು, ನಿರೂಪಕರೊಂದಿಗೆ ಸಂವಾದ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ರಾಮ್ ಚರಣ್ ಅವರ ಕಟ್ಟಾ ಅಭಿಮಾನಿಯೊಬ್ಬ ಭದ್ರತಾ ವಲಯವನ್ನು ಮೀರಿ ಹಠಾತ್ತನೆ ವೇದಿಕೆಯತ್ತ ಧಾವಿಸಿ ಬಂದಿದ್ದಾನೆ.
ಪೆದ್ದಿ ಸಿನಿಮಾ ಪ್ರಮೋಷನ್ ವೇಳೆ ರಾಮ್ ಚರಣ್ ಕಾಲಿಗೆ ಬಿದ್ದ ಅಭಿಮಾನಿ: ಜಾನ್ವಿ ಕಪೂರ್ ಶಾಕ್!#ramcharan #janhvikapoor #KevinKunta #PeddiMovie #Kannadanews #navasamajanews pic.twitter.com/AoD9eVyFVu
— navasamaja (@navasamajanews) June 2, 2026
ಹೀಗೆ ಅಭಿಮಾನಿ ವೇದಿಕೆಯ ಮೇಲಿದ್ದ ನಟರನ್ನು ತೀರಾ ಹತ್ತಿರದಿಂದ ತಲುಪುತ್ತಿದ್ದಂತೆ ಎಚ್ಚೆತ್ತ ಬೌನ್ಸರ್‌ಗಳು ತಕ್ಷಣ ಆತನನ್ನು ತಡೆದಿದ್ದಾರೆ. ಈ ವೇಳೆ ವೇದಿಕೆಯ ಮೇಲೆ ತೀವ್ರ ನೂಕುನುಗ್ಗಲು ಮತ್ತು ಗದ್ದಲ ಏರ್ಪಟ್ಟಿತು. ಭದ್ರತಾ ಸಿಬ್ಬಂದಿ ಆತನನ್ನು ಹಿಂದಕ್ಕೆ ಎಳೆಯುವಾಗ ಉಂಟಾದ ಗಲಾಟೆಯಿಂದಾಗಿ ಪಕ್ಕದಲ್ಲೇ ಕುಳಿತಿದ್ದ ನಾಯಕಿ ಜಾನ್ವಿ ಕಪೂರ್ ಒಂದು ಕ್ಷಣ ತೀವ್ರ ದಿಗ್ಭ್ರಮೆಗೊಳಗಾಗಿ, ಮುಜುಗರ ಅನುಭವಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಇದನ್ನೂ ಓದಿ : ಭದ್ರತೆ ನಡುವೆಯೂ ಲೀಕ್ ಆಯ್ತು ಮಹೇಶ್ ಬಾಬು ಚಿತ್ರದ ‘ಉಗ್ರಭಟ್ಟಿ ಗುಹೆ’ ಸೆಟ್!
ಆ ನಂತರ ಪರಿಸ್ಥಿತಿ ಶಾಂತವಾದಾಗ, ರಾಮ್ ಚರಣ್ ಅವರ ವೈಯಕ್ತಿಕ ಬಾಡಿಗಾರ್ಡ್ ಕೆವಿನ್ ಕುಂಟಾ ಆ ಅಭಿಮಾನಿಗೆ ನಟನನ್ನು ಭೇಟಿಯಾಗಲು ಅವಕಾಶ ಮಾಡಿಕೊಟ್ಟರು. ಅಭಿಮಾನಿ ನಟನ ಪಾದ ಮುಟ್ಟಿ ಆಶೀರ್ವಾದ ಪಡೆದು ಕೃತಜ್ಞತೆ ಸಲ್ಲಿಸಿದ. ಕಷ್ಟದ ಸಂದರ್ಭದಲ್ಲೂ ಶಾಂತವಾಗಿ ವರ್ತಿಸಿದ ರಾಮ್ ಚರಣ್ ನಡೆಗೆ ಮತ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ ಭದ್ರತಾ ತಂಡದ ಕಾರ್ಯಕ್ಕೆ ಸದ್ಯ ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.