ಹೈದರಾಬಾದ್: ತೆಲುಗು ನಟ (Tollywood) ಜೂನಿಯರ್ ಎನ್‌ಟಿಆರ್ (Jr NTR) ಅವರು ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ‘ಡ್ರ್ಯಾಗನ್’ ಚಿತ್ರಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇತ್ತೀಚೆಗೆ ತಮ್ಮ ಕಟ್ಟುಮಸ್ತಾದ ದೇಹದ ಫೋಟೋವೊಂದನ್ನು ಹಂಚಿಕೊಂಡಿರುವ ಅವರು, ತಮ್ಮ ಫಿಟ್ನೆಸ್ ಬಗ್ಗೆ ವ್ಯಂಗ್ಯವಾಡುತ್ತಿದ್ದ ಟ್ರೋಲ್‌ಗಳಿಗೆ ಸರಿಯಾದ ತಿರುಗೇಟು ನೀಡಿದ್ದಾರೆ.
ಫೋಟೋ ಶೇರ್ ಮಾಡಿಕೊಂಡ ನಟ
ಜೂನಿಯರ್ ಎನ್‌ಟಿಆರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಿಂಭಾಗದಿಂದ ತೆಗೆದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರ ದೇಹದಾರ್ಢ್ಯ ಮತ್ತು ಫಿಟ್ನೆಸ್ ಕಂಡು ಅಭಿಮಾನಿಗಳು ಬೆರಗಾಗಿದ್ದಾರೆ. ಇದನ್ನು ನಿರ್ಮಿಸಿದ್ದು, ಖರೀದಿಸಿದ್ದಲ್ಲ (Built, Not Bought) ಎಂಬ ಕ್ಯಾಪ್ಶನ್ ನೀಡುವ ಮೂಲಕ, ತಮ್ಮ ಈ ಬದಲಾವಣೆ ಶ್ರಮದಿಂದ ಬಂದಿದ್ದೇ ಹೊರತು ಯಾವುದೇ ಅಡ್ಡದಾರಿಯಿಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
View this post on Instagram
‘ದೇವರ’ ಮತ್ತು ‘ವಾರ್ 2’ ಚಿತ್ರಗಳ ನಂತರ ಜೂನಿಯರ್ ಎನ್‌ಟಿಆರ್ ಅವರು ಈಗ ಪ್ರಶಾಂತ್ ನೀಲ್ ಅವರ ಪ್ರಾಜೆಕ್ಟ್ ಮೇಲೆ ಸಂಪೂರ್ಣ ಗಮನ ಹರಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು ಸಾಕಷ್ಟು ತೂಕ ಇಳಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಮೊದಲು ಅವರು ತೂಕ ಇಳಿಸಿಕೊಂಡಾಗ ಹಲವರು ಟ್ರೋಲ್ ಮಾಡಿದ್ದರು. ಆದರೆ ಈಗ ತಮ್ಮ ಸಿಕ್ಸ್ ಪ್ಯಾಕ್ ಮತ್ತು ಮಸಲ್ ಬಾಡಿ ತೋರಿಸುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಪ್ರಶಾಂತ್ ನೀಲ್ ಅವರ ಸಿನಿಮಾಗಳಲ್ಲಿ ನಾಯಕ ನಟರು ತುಂಬಾ ರಗಡ್ ಆಗಿ ಕಾಣಿಸಿಕೊಳ್ಳುವುದು ವಾಡಿಕೆ, ಈಗ ತಾರಕ್ ಕೂಡ ಅದೇ ಹಾದಿಯಲ್ಲಿದ್ದಾರೆ.
ಸಿನಿಮಾ ಬಗ್ಗೆ ಹರಡಿದೆ ವದಂತಿಗಳು
‘ಸಲಾರ್’ ಚಿತ್ರದ ಭರ್ಜರಿ ಯಶಸ್ಸಿನ ನಂತರ ಪ್ರಶಾಂತ್ ನೀಲ್ ಅವರು ‘ಡ್ರ್ಯಾಗನ್’ ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾ ನಿಂತು ಹೋಗಿದೆ ಎಂಬ ವದಂತಿಗಳು ಹರಡಿದ್ದರೂ, ಚಿತ್ರತಂಡ ಪದೇ ಪದೇ ಸ್ಪಷ್ಟನೆ ನೀಡುತ್ತಾ ಬಂದಿದೆ. ಈಗ ಎನ್‌ಟಿಆರ್ ಅವರ ಹೊಸ ಲುಕ್ ನೋಡಿದ ಮೇಲೆ ಅಭಿಮಾನಿಗಳಲ್ಲಿ ಸಿನಿಮಾದ ಮೇಲಿನ ಕ್ರೇಜ್ ದುಪ್ಪಟ್ಟಾಗಿದೆ. ಶೂಟಿಂಗ್ ಮುಗಿಯುವವರೆಗೆ ತಾರಕ್ ಇದೇ ಫಿಟ್ನೆಸ್ ಕಾಯ್ದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಜೂನಿಯರ್ ಎನ್‌ಟಿಆರ್ ಅವರ ಈ ಶ್ರಮ ಮತ್ತು ಪ್ರಶಾಂತ್ ನೀಲ್ ಅವರ ನಿರ್ದೇಶನವು ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡುತ್ತಿದೆ.