ಬೆಂಗಳೂರು-ನಿಡಘಟ್ಟ ನಡುವಿನ ಶೇಷಗಿರಿಯಹಳ್ಳಿ ಮತ್ತು ಕಣಮಿಣಕೆಯ ಟೋಲ್‌ಗಳು ಕಾರ್ಯಾಚರಣೆ ಆರಂಭಿಸಿದ್ದು, ಬೆಂಗಳೂರಿನಿಂದ ಮೈಸೂರು ಕಡೆ ಹೋಗುವವರು ಕಣಮಿಣಕಿ ಬಳಿ, ಮೈಸೂರು ಕಡೆಯಿಂದ ಬೆಂಗಳೂರು ಬರುವವರು ಶೇಷಗಿರಿಹಳ್ಳಿಯ ಟೋಲ್‌ನಲ್ಲಿ ಶುಲ್ಕ ಪಾವತಿಸಬೇಕಾಗುತ್ತದೆ. ಮೊದಲ ಹಂತದ 55.63 ಕಿಮೀ ರಸ್ತೆಗೆ ಶುಲ್ಕ ಸಂಗ್ರಹ ಮಾಡಲಾಗುತ್ತಿದೆ.
6 ರೀತಿಯಲ್ಲಿ ವಾಹನಗಳನ್ನ ವರ್ಗೀಕರಿಸಿ ಟೋಲ್ ಸಂಗ್ರಹ ಮಾಡಲಾಗುತ್ತಿದ್ದು ಯಾವ್ಯಾವ ವಾಹನಗಳು ಎಷ್ಟು ಟೋಲ್ ಪಾವತಿಸಬೇಕು ಎಂಬುದರ ವಿವರ ಇಲ್ಲಿದೆ.
ವಾಹನ | ಒನ್ ವೇ | ಟೂ ವೇ | ತಿಂಗಳ ಪಾಸ್ |
ಕಾರು, ಜೀಪ್,ವ್ಯಾನ್ | ರೂ.135 | ರೂ.205 | ರೂ.4,525 |
ಲಘು ವಾಹನ, ಮಿನಿ ಬಸ್ | ರೂ.220 | ರೂ 330 | ರೂ 7,315 |
ಬಸ್, ಟ್ರಕ್ | ರೂ 460 | ರೂ 690 | ರೂ 15,325 |
3-ಆಕ್ಸೆಲ್ ವಾಹನ | ರೂ 500 | ರೂ 750 | ರೂ 16,715 |
ಭಾರೀ ನಿರ್ಮಾಣ ವಾಹನ | ರೂ720 | ರೂ 1080 | ರೂ 24,030 |
ಅತಿ ಗಾತ್ರದ ವಾಹನ | ರೂ 880 | ರೂ 1,315 | ರೂ 29,255 |
ಆದರೆ ಕಾಮಗಾರಿ ಪೂರ್ಣಗೊಳಿಸದೇ, ಸರ್ವೀಸ್ ರಸ್ತೆ ಮಾಡದೇ ಟೋಲ್ ಸಂಗ್ರಹ ಮಾಡಬಾರದೆಂದು ಹಲವು ಸಂಘ ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಇಂದು ಪ್ರತಿಭಟನೆಗಳು ನಡೆಯುವ ಸಾಧ್ಯತೆಗಳಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಆಟೋ, ಬೈಕ್ ಗೆ ನೋ ಎಂಟ್ರಿ
ಹೆದ್ದಾರಿ ಪ್ರಾಧಿಕಾರದ ನಿಯಮದ ಪ್ರಕಾರ ಈ ಹೆದ್ದಾರಿಯಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್‌ಗಳ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತ ತಪ್ಪಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ. ನಿರ್ದಿಷ್ಟ ವೇಗ, ಸುರಕ್ಷತೆ ಹಾಗೂ ಯಾವುದೇ ಅಡೆ-ತಡೆ ಇಲ್ಲದೇ ಪ್ರಯಾಣಿಸಲು ಈ ಹೆದ್ದಾರಿ ನಿರ್ಮಿಸಲಾಗಿದ್ದು, ಬೈಕ್ ಆಟೋಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಆದರೆ ಸರ್ವಿಸ್ ರಸ್ತೆ ನಿರ್ಮಾಣ ಆಗುವವರೆಗೂ ಆಟೋ ಹಾಗೂ ಬೈಕ್‌ಗಳಿಗೆ ದಶಪಥ ಹೆದ್ದಾರಿಯಲ್ಲಿ ಸಂಚರಿಸಲು ಅವಕಾಶವಿದೆ. ಸರ್ವಿಸ್ ರಸ್ತೆ ನಿರ್ಮಾಣವಾದ ಬಳಿಕ ಬೈಕ್ ಆಟೋ ಟ್ರ್ಯಾಕ್ಟರ್‌ಗಳು ಈ ರಸ್ತೆಯಲ್ಲಿ ಪ್ರವೇಶಿಸುವಂತಿಲ್ಲ.