ಬೆಂಗಳೂರು : ಹಲವು ವರ್ಷಗಳ ನಿರೀಕ್ಷೆಯ ಬಳಿಕ ಬುಧವಾರ ಡಿ.ಕೆ. ಶಿವಕುಮಾರ್ ( DK Shivakumar) ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಇಂದು ಸಂಜೆ ರಾಜಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿಎಂ ಜೊತೆಗೆ 9 ಮಂದಿ ಸಚಿವರೂ ಸಹ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರಾದ್ಯಂತ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ಜನದಟ್ಟಣೆ ನಿಯಂತ್ರಿಸಲು ಮುನ್ನಚ್ಚರಿಕೆ ವಹಿಸಲಾಗಿದೆ.
* ವಾಡಿಕೆಯಂತೆ ಸಿಎಂ ಜೊತೆಗೆ ಪ್ರಮಾಣವಚನ ಸ್ವೀಕರಿಸಲಿರುವ ಸಚಿವರ ಪಟ್ಟಿ ಇಷ್ಟು ಹೊತ್ತಿಗೆ ಬಹಿರಂಗವಾಗಬೇಕಿತ್ತು. ಆದರೆ ಇದುವರೆಗೂ ಪಟ್ಟಿ ಹೊರಬಿದ್ದಿಲ್ಲ. ಸಚಿವಾಕಾಂಕ್ಷರ ದಂಡು ಹೆಚ್ಚಾಗುತ್ತಿರುವಂತೆಯೇ ಶಿವಕುಮಾರ್ ಅವರ ನಿವಾಸ ಕಾಂಗ್ರೆಸ್ ಶಕ್ತಿಕೇಂದ್ರವಾಗಿ ಮಾರ್ಪಟ್ಟಿದೆ.
*ಡಿ.ಕೆ. ಶಿವಕುಮಾರ್ ಅವರನ್ನು ನಿಯಂತ್ರಿಸಲು ಹಲವು ಡಿಸಿಎಂಗಳನ್ನು ನಿಯೋಜಿಸಲಾಗುತ್ತದೆ ಎಂಬ ಸುದ್ದಿ ಕಾಂಗ್ರೆಸ್ ಪಾಳೆಯದಲ್ಲಿ ಹಬ್ಬಿತ್ತು. ಆದರೆ ಈ ವದಂತಿಗಳಿಗೆ ತೆರೆ ಬಿದ್ದಿದ್ದು, ಕೇವಲ ಜಿ. ಪರಮೇಶ್ವರ್ ಅವರು ಡಿಸಿಎಂ ಸ್ಥಾನವನ್ನು ಅಲಂಕರಿಸುವ ನಿರೀಕ್ಷೆಯಿದೆ.
*ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿದಿದ್ದರೂ ಸಹ ಕಾವೇರಿ ನಿವಾಸದಲ್ಲೇ ಅವರ ವಾಸ್ತವ್ಯ ಮುಂದುವರೆಯಲಿದೆ. ಡಿಕೆ ಶಿವಕುಮಾರ್ ಬೇರೆ ಸರ್ಕಾರಿ ನಿವಾಸಕ್ಕೆ ವಾಸ್ತವ್ಯ ಬದಲಿಸಲಿದ್ದಾರೆ.
* ಡಿಕೆ ಹುಟ್ಟೂರಾದ ಕನಕಪುರದಲ್ಲಿ ಇಂದು ಅಭಿಮಾನಿಗಳ ಸಂಭ್ರಮ ಎಲ್ಲೆ ಮೀರಿದೆ. ತಮ್ಮೂರಿನ ವ್ಯಕ್ತಿ ಸಿಎಂ ಆಗುತ್ತಿರುವ ಸುಸಂದರ್ಭದಲ್ಲಿ ವಿಶೇಷ ಪೂಜೆ, ಅನ್ನದಾನ, ಹರಕೆ ಕಾರ್ಯಗಳನ್ನು ಅಭಿಮಾನಿಗಳು ನೆರವೇರಿಸುತ್ತಿದ್ದಾರೆ.
* ನೇರವಾಗಿ ಡಿಕೆ ಶಿವಕುಮಾರ್‌ಅವರ ಪ್ರಮಾಣ ವಚನ ಕಾರ್ಯಕ್ರಮವನ್ನು ವೀಕ್ಷಿಸುವವರಿಗೆ ಮೂರು ರೀತಿಯ, ಮೂರು ದರ್ಜೆಯ ಪಾಸ್ ವಿತರಿಸಲಾಗುತ್ತಿದೆ. ಗಣ್ಯ, ಅತಿಗಣ್ಯ ಅತಿಥಿಗಳ ಪಟ್ಟಿಯನ್ನು ಗಮನದಲ್ಲಿರಿಸಿಕೊಂಡು ಈ ವ್ಯವಸ್ಥೆ ಮಾಡಲಾಗಿದೆ.
*ಡಿಕೆ ಶಿವಕುಮಾರ್ ಪ್ರಮಾಣ ವಚನದ ಅಂಗವಾಗಿ ಇಂದು ವಿಕಾಸಸೌಧ ಮತ್ತು ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಅರ್ಧ ದಿನ ರಜೆ ಘೋಷಿಸಲಾಗಿದೆ.
* ಪ್ರಮಾಣವಚನ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು ಸಾಧ್ಯವಾಗದವರ ಅನುಕೂಲಕ್ಕಾಗಿ ಅಲ್ಲಲ್ಲಿ ಬೃಹತ್ ಗಾತ್ರದ ಎಲ್‌ಸಿಡಿ ಫಲಕಗಳನ್ನು ಅಳವಡಿಸಿ ನೇರ ಪ್ರಸಾರ ಮಾಢುವ ವ್ಯವಸ್ಥೆ ಕಲ್ಪಿಸಲಾಗಿದೆ.
*ಕಾಂಗ್ರೆಸ್ ಪಕ್ಷದ ಹಲವು ಗಣ್ಯರು ಸೇರಿದಂತೆ ಬೇರೆ ಪಕ್ಷದ ಮುಖ್ಯ ವ್ಯಕ್ತಿಗಳಿಗೂ ಸಹ ಕರೆಯೋಲೆ ತಲುಪಿಸಲಾಗಿದೆ. ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸಿಂಗ್ ಸುಖು, ತೆಲಂಗಾಣ ಸಿಎಂ ರೇವಂತ್ ರೆಡ್ಡಿ,ಕೇರಳದ ಸಿಎಂ ವಿ.ಡಿ. ಸತೀಶನ್, ಅಷ್ಟೇ ಅಲ್ಲದೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರಿಷ್ಠರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ.
* ರಾಜಕೀಯ ವ್ಯಕ್ತಿಗಳು ಮಾತ್ರವಲ್ಲದೇ ನ್ಯಾಯಾಂಗದ ಪ್ರಮುಖರು, ಮಠಾಧೀಶರು, ಸಾಹಿತಿಗಳು, ರಂಗಭೂಮಿ ಕಲಾವಿದರು, ಕ್ರೀಡಾಪಟುಗಳು, ಉದ್ಯಮಿಗಳು ಹಾಗೂ ಚಿತ್ರನಟರೂ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
* ಸಂಜೆ 4.05 ಕ್ಕೆ ಸಲ್ಲುವ ಗೋಧೂಳಿ ಲಗ್ನದಲ್ಲಿ ಡಿ.ಕೆ ಶಿವಕುಮಾರ್ ಪಟ್ಟಾಭಿಷೇಕ ನರೆವೇರಲಿದೆ. ಹಿಂದೂ ಪಂಚಾಂಗ ಹಾಗೂ ಸಂಖ್ಯಾಶಾಸ್ತ್ರವನ್ನಾಧರಿಸಿ ರಾಜಗುರು ದ್ವಾರಕಾನಾಥ್ ಈ ಮುಹೂರ್ತವನ್ನು ನಿಷ್ಕರ್ಷೆ ಮಾಡಿದ್ದಾರೆ.