ಉರಿಗೌಡ-ನಂಜೇಗೌಡರ ಟ್ವಿಟರ್ ಖಾತೆ ಆಯ್ತು, ಆಧಾರ್ ಕಾರ್ಡ್ ಆಯ್ತು, ಇದೀಗ ತಿಥಿ ಕಾರ್ಡ್ ಕೂಡಾ ರೆಡಿ ಆಗಿದೆ. ಟಿಪ್ಪು ಸುಲ್ತಾನ್‌ರನ್ನು ಕೊಂದ ಒಕ್ಕಲಿಗರೆಂದು ಬಿಜೆಪಿ ಪ್ರಚಾರ ಮಾಡುತ್ತಿದ್ದ ಉರಿಗೌಡ, ನಂಜೇಗೌಡ ಪಾತ್ರಗಳು ಸದ್ಯ ಹಾಸ್ಯಾಸ್ಪದ ಸಂಗತಿಯಾಗಿ ಮಾರ್ಪಟ್ಟಿದೆ. ಪ್ರಬಲ ಒಕ್ಕಲಿಗ ಸ್ವಾಮೀಜಿ ನಿರ್ಮಲಾನಂದನಾಥರು ಈ ವಿವಾದಕ್ಕೆ ಬ್ರೇಕ್ ಹಾಕಿದ ಬಳಿಕ ಇದೀಗ ಉರಿಗೌಡ-ನಂಜೇಗೌಡರ ತಿಥಿ ಪೋಸ್ಟರ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಚುನಾವಣೆ ಮುನ್ನ ಹುಟ್ಟಿ, ಚುನಾವಣೆಗೂ ಮುನ್ನ ಸತ್ತ ಉರಿಗೌಡ, ನಂಜೇಗೌಡರಿಗೆ ಶೃಧ್ಧಾಂಜಲಿಗಳು ಎಂದು ಹಲವು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಕೈಲಾಸ ಸಮಾರಾಧನೆಯನ್ನು ಎಪ್ರಿಲ್ 1 ರಂದು ಬಿಜೆಪಿಯ ಮಲ್ಲೇಶ್ವರಂ ಕಛೇರಿಯಲ್ಲಿ ಮಾಡಲಾಗುತ್ತಿದೆ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ.
ಅದಕ್ಕೂ ಮೊದಲು, ಉರಿಗೌಡ-ನಂಜೇಗೌಡ ಹೆಸರಿನಲ್ಲಿರುವ ಆಧಾರ್ ಕಾರ್ಡ್ ಒಂದನ್ನೂ ಕೂಡಾ ತೇಲಿಬಿಡಲಾಗಿತ್ತು. ಅದರಲ್ಲಿ ತಂದೆ-ತಾಯಿ ಹೆಸರಿನ ವಿಭಾಗದಲ್ಲಿ ಸಚಿವ ಅಶ್ವಥನಾರಾಯಣ ಹಾಗೂ ಸಿಟಿ ರವಿಯ ಹೆಸರನ್ನು ಬರೆಯಲಾಗಿದೆ. ಹುಟ್ಟಿದ್ದು ಚುನಾವಣೆ ಬಂದಾಗ, ಬಿಜೆಪಿ ಕಾರ್ಯಾಲಯದಲ್ಲಿ ಎಂದು ವ್ಯಂಗ್ಯವಾಗಿ ಬರೆಯಲಾಗಿದೆ.
ಇನ್ನೊಂದು ಪೋಸ್ಟರಿನಲ್ಲಿ, “ಹುಟ್ಟಿದ ಮೇಲೆ ಎಲ್ಲರೂ ದಿವಂಗತರಾಗುತ್ತಾರೆ, ಆದರೆ, ಹುಟ್ಟದೆಯೂ ದಿವಂಗತರಾದವರು ಇಬ್ಬರೇ, ಉರಿಗೌಡ ಮತ್ತು ನಂಜೇಗೌಡ” ಎಂದು ಬರೆದು ಹಂಚಲಾಗಿದೆ.
ಒಟ್ಟಾರೆ, ಉರಿಗೌಡ, ನಂಜೇಗೌಡ ಪಾತ್ರಗಳನ್ನು ಇಟ್ಟು ಚುನಾವಣೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದ ಬಿಜೆಪಿ ಎಡವಿ ಬಿದ್ದು, ಮುಜುಗರಕ್ಕೀಡಾಗಿದೆ.