ತಿರುಪತಿ: ತಿರುಮಲ ಶ್ರೀವಾರಿ (Tirumala Tirupati) ದರ್ಶನಕ್ಕೆ ಪ್ಲಾನ್ ಮಾಡುತ್ತಿರುವ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನಂ (TTD) ಜುಲೈ ತಿಂಗಳ ದರ್ಶನ, ಆರ್ಜಿತ ಸೇವೆ ಹಾಗೂ ವಸತಿ ಗೃಹಗಳ ಬುಕ್ಕಿಂಗ್‌ಗೆ ಸಂಬಂಧಿಸಿದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಕ್ತರು ಅಧಿಕೃತ ವೆಬ್‌ಸೈಟ್ ಮೂಲಕ ನಿಗದಿಪಡಿಸಿದ ಸಮಯದಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದೆ.
ದರ್ಶನ ಮತ್ತು ಸೇವಾ ಟಿಕೆಟ್‌ಗಳ ವೇಳಾಪಟ್ಟಿ ಇಲ್ಲಿದೆ:
- ಏಪ್ರಿಲ್ 18 (ಬೆಳಗ್ಗೆ 10 ಗಂಟೆ): ಸುಪ್ರಭಾತಂ, ತೋಮಾಲ, ಅರ್ಚನೆ ಹಾಗೂ ಅಷ್ಟದಳ ಪಾದಪದ್ಮಾರಾಧನೆಯಂತಹ ಪ್ರಮುಖ ಆರ್ಜಿತ ಸೇವಾ ಟಿಕೆಟ್‌ಗಳ ಕೋಟಾ ಬಿಡುಗಡೆಯಾಗಲಿದೆ.
- ಏಪ್ರಿಲ್ 20: ಈ ಸೇವಾ ಟಿಕೆಟ್‌ಗಳನ್ನು ಪಡೆಯಲು ಭಕ್ತರು ‘ಲಕ್ಕಿ ಡಿಪ್’ಗಾಗಿ ನೋಂದಾಯಿಸಿಕೊಳ್ಳಬಹುದು. ಲಕ್ಕಿ ಡಿಪ್‌ನಲ್ಲಿ ಟಿಕೆಟ್ ಲಭಿಸಿದವರು ಏಪ್ರಿಲ್ 22ರ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಿ ಟಿಕೆಟ್ ಖಚಿತಪಡಿಸಿಕೊಳ್ಳಬೇಕು.
- ಏಪ್ರಿಲ್ 21 (ಬೆಳಗ್ಗೆ 10 ಗಂಟೆ): ಕಲ್ಯಾಣೋತ್ಸವ, ಉಂಜಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ ಹಾಗೂ ಸಹಸ್ರ ದೀಪಾಲಂಕಾರ ಸೇವೆಗಳ ಟಿಕೆಟ್‌ಗಳು ಲಭ್ಯವಿರುತ್ತವೆ. ಅಂದೇ ಮಧ್ಯಾಹ್ನ 3 ಗಂಟೆಗೆ ವರ್ಚುವಲ್ ಸೇವೆಗಳ ಕೋಟಾ ಬಿಡುಗಡೆಯಾಗಲಿದೆ.
- ಏಪ್ರಿಲ್ 23: ಬೆಳಗ್ಗೆ 10ಕ್ಕೆ ಅಂಗಪ್ರದಕ್ಷಿಣೆ ಟೋಕನ್, 11ಕ್ಕೆ ಶ್ರೀವಾಣಿ ಟ್ರಸ್ಟ್ ದರ್ಶನ ಟಿಕೆಟ್ ಹಾಗೂ ಮಧ್ಯಾಹ್ನ 3 ಗಂಟೆಗೆ ವಯೋವೃದ್ಧರು, ದಿವ್ಯಾಂಗರು ಮತ್ತು ಆರೋಗ್ಯ ಸಮಸ್ಯೆ ಇರುವವರಿಗಾಗಿ ಮೀಸಲಿರುವ ವಿಶೇಷ ದರ್ಶನ ಟೋಕನ್‌ಗಳು ಬಿಡುಗಡೆಯಾಗಲಿವೆ.
- ಏಪ್ರಿಲ್ 24: ಬೆಳಗ್ಗೆ 10ಕ್ಕೆ 300 ರೂ. ವಿಶೇಷ ಪ್ರವೇಶ ದರ್ಶನ ಟಿಕೆಟ್ ಹಾಗೂ ಮಧ್ಯಾಹ್ನ 3 ಗಂಟೆಗೆ ತಿರುಮಲ ಮತ್ತು ತಿರುಪತಿಯಲ್ಲಿನ ವಸತಿ ಗೃಹಗಳ (Rooms) ಬುಕ್ಕಿಂಗ್ ಕೋಟಾ ತೆರೆಯಲಿದೆ.
ಇದನ್ನೂ ಓದಿ: ತಿರುಮಲ ಲಡ್ಡು ವಿವಾದ – ತಪ್ಪು ಮಾಹಿತಿ ಹರಡುವವರ ವಿರುದ್ಧದ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ
ಚಗಂಟಿ ಕೋಟೇಶ್ವರ ರಾವ್ ಅವರಿಂದ ಪ್ರವಚನ: ಟಿಟಿಡಿಯ ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ಭಕ್ತರಲ್ಲಿ ಆಧ್ಯಾತ್ಮಿಕ ಚೈತನ್ಯ ತುಂಬಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಪ್ರಖ್ಯಾತ ಆಧ್ಯಾತ್ಮಿಕ ವಾಗ್ಮಿ ಬ್ರಹ್ಮಶ್ರೀ ಚಗಂಟಿ ಕೋಟೇಶ್ವರ ರಾವ್ ಅವರು ಏಪ್ರಿಲ್ 16ರ ಗುರುವಾರ ಸಂಜೆ 5:30ಕ್ಕೆ ತಿರುಪತಿಯ ಮಹತಿ ಕಲಾಕ್ಷೇತ್ರದಲ್ಲಿ ‘ದೈನಂದಿನ ಜೀವನದಲ್ಲಿ ಧರ್ಮಾಚರಣೆ’ ಎಂಬ ವಿಷಯದ ಕುರಿತು ಪ್ರವಚನ ನೀಡಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಆಧ್ಯಾತ್ಮಿಕ ಸುಧೆಯನ್ನು ಸವಿಯಬೇಕೆಂದು ಟಿಟಿಡಿ ಕೋರಿದೆ.
ಭಕ್ತರು ದರ್ಶನ ಹಾಗೂ ಉಳಿದ ಸೇವೆಗಳಿಗಾಗಿ ಕೇವಲ ಅಧಿಕೃತ ವೆಬ್‌ಸೈಟ್ https://ttdevasthanams.ap.gov.in ಮಾತ್ರ ಬಳಸುವಂತೆ ದೇವಸ್ಥಾನದ ಮಂಡಳಿ ಮನವಿ ಮಾಡಿದೆ.