ಟಿಪ್ಪು ಸುಲ್ತಾನ್ ರನ್ನು ಒಕ್ಕಲಿಗ ಕುಲದ ಉರಿಗೌಡ ಮತ್ತು ನಂಜೇಗೌಡ ಎಂಬವರು ಕೊಂದಿದ್ದಾರೆ ಎಂದು ಬಿಜೆಪಿ ಪ್ರತಿಪಾದಿಸುತ್ತಿರುವ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮತ್ತೊಂದು ʼಹೊಸ ಐತಿಹಾಸಿಕ ವಿಚಾರʼವನ್ನು ಪ್ರಸ್ತಾಪಿಸಿದ್ದಾರೆ,
ಟಿಪ್ಪು ಸುಲ್ತಾನ್ ಹಾಸನದ ಹೆಸರನ್ನು ʼಕೈಮಾಬಾದ್ʼ ಎಂದು ಬದಲಾಯಿಸಲು ಯೋಜಿಸಿದ್ದ ಎಂದು ಹೇಳಿದ್ದಾರೆ. ಅಲ್ಲದೆ, ನಂಜೇಗೌಡ ಮತ್ತು ಉರಿಗೌಡ ಟಿಪ್ಪುವನ್ನು ಕೊಂದಿರೋದು ಸತ್ಯ ಎಂದು ಪ್ರತಿಪಾದಿಸಿದ್ದಾರೆ. ಶುಕ್ರವಾರ ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಮಾತನಾಡಿದ ಸಿಟಿ ರವಿ, ”ಉರಿಗೌಡ, ನಂಜೇಗೌಡರು ಟಿಪ್ಪುವನ್ನು ಕೊಂದಿರುವುದು ಐತಿಹಾಸಿಕ ಸತ್ಯ. ಟಿಪ್ಪು ಹಾಸನಕ್ಕೆ ʼಕೈಮಾಬಾದ್ʼ ಎಂದು ಹೆಸರಿಟ್ಟಿದ್ದ, ಹಾಸನವನ್ನು ಕೈಮಾಬಾದ್ ಎಂದು ಕರೆಯುವುದು ಹೆಚ್ ಡಿ ಕುಮಾರಸ್ವಾಮಿಗೆ ಇಷ್ಟ ಇರಬಹುದು” ಎಂದು ಹೇಳಿದ್ದಾರೆ.
ಉರಿಗೌಡ ಮತ್ತು ನಂಜೇಗೌಡರ ಬಗ್ಗೆ ಬಿಜೆಪಿ ಪ್ರತಿಪಾದನೆಗಳಿಗೆ ಹೆಚ್‌ಡಿಕೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ರು. ಟಿಪ್ಪು ಕೊಂದವರು ಉರಿಗೌಡ, ನಂಜೇಗೌಡ ಎಂದು ಪ್ರಚಾರ ಮಾಡುವ ಮೂಲಕ ಬಿಜೆಪಿಯವರು ಒಕ್ಕಲಿಗ ಸಮಾಜದ ಗೌರವ ಹಾಳು ಮಾಡುತ್ತಿದ್ದಾರೆ ಎಂದು ಹೆಚ್‌ಡಿಕೆ ಕಿಡಿ ಕಾರಿದ್ದರು.
ಕುಮಾರಸ್ವಾಮಿ ಆಕ್ಷೇಪಕ್ಕೆ ಪ್ರತಿಕ್ರಿಯಿಸಿರುವ ಸಿಟಿ ರವಿ, ಈಗ ಒಂದುವೇಳೆ ಟಿಪ್ಪು ಮತ್ತು ಆತನ ಸಿದ್ದಾಂತ ಬದುಕಿದ್ದರೆ ಹಾಸನ ಕೈಮಾಬಾದ್ ಆಗಿರುತ್ತಿತ್ತು. ಟಿಪ್ಪು ಬದುಕಿದ್ದರೇ ಯಾರ್ಯಾರ ಕತೆ ಏನಾಗುತ್ತಿತ್ತೋ ಏನೋ.? ಎಂದಿದ್ದಾರೆ.