ಬೆಳಗಾವಿ: ಮತದಾರರಿಗೆ ಹಂಚಲು ತಂದಿದ್ದ ನೂರಾರು ಟಿಫಿನ್ ಬಾಕ್ಸ್‌ಗಳನ್ನು ರಮೇಶ್ ಜಾರಕಿಹೊಳಿ ಆಪ್ತ ನಾಗೇಶ್ ಮನ್ನೋಳ್ಕರ್ ಸ್ಪರ್ಧಿಸುವ ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣಾ ಅಧಿಕಾರಿಗಳು ಭಾನುವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.
ಕುದ್ರೆಮನಿ ಗ್ರಾಮದಲ್ಲಿ ಮತದಾರರಿಗೆ ಹಂಚುವ ಸಲುವಾಗಿ ಟಿಫಿನ್ ಬಾಕ್ಸ್‌ಗಳನ್ನು ಸಂಗ್ರಹಿಸಿ ಇಡಲಾಗಿದೆಯೆಂಬ ಖಚಿತ ಮಾಹಿತಿಯ ಮೇರೆಗೆ ಬೆಳಗಾವಿ ಚುನಾವಣಾಧಿಕಾರಿಯೂ ಆಗಿರುವ ಡಿಸಿ ನಿತೇಶ್ ಪಾಟೀಲ್ ನೇತೃತ್ವದ ತಂಡ ದಾಳಿ ಮಾಡಿತ್ತು.
ವಶಪಡಿಸಿಕೊಂಡಿರುವ ಟಿಫಿನ್ ಬಾಕ್ಸ್ ಮತ್ತಿತರ ಗಿಫ್ಟ್ ಐಟಮ್ಸ್ ಗಳ ಮೇಲೆ ನಾಗೇಶ್ ಮನ್ನೋಳ್ಕರ್ ಭಾವಚಿತ್ರ ಹಾಕಲಾಗಿತ್ತು. ಪ್ರಕರಣದಲ್ಲಿ ಇಬ್ಬರ ವಿರುದ್ಧ ದೂರು ದಾಖಲಾಗಿದೆ.
ಈ ಮತಕ್ಷೇತ್ರವು ರಮೇಶ್ ಜಾರಕಿಹೊಳಿಗೆ ರಾಜಕೀಯ ಬದ್ದವೈರಿಯಾದ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧಿಸುವ ಮತಕ್ಷೇತ್ರವೂ ಸಹ ಹೌದು. ಕೆಲದಿನಗಳ ಹಿಂದಷ್ಟೇ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ತಂದಿದ್ದ ಗಿಫ್ಟ್ ಸಾಮಗ್ರಿಗಳನ್ನು ರಮೇಶ್ ಜಾರಕಿಹೊಳಿ ಬೆಂಬಲಿಗರು ಒಡೆದು ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.