ಮೈಸೂರು : ಕಾವೇರಿ ನದಿಯ ನೀರಲ್ಲಿ ಮುಳುಗುತ್ತಿದ್ದ ತನ್ನಿಬ್ಬರ ಮೊಮ್ಮಕ್ಕಳನ್ನು ರಕ್ಷಿಸಲು ಹೋದ ಅಜ್ಜ ಸೇರಿ ಮೂವರೂ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘೋರ ದುರಂತ ಜಿಲ್ಲೆಯ ಟಿ.ನರಸೀಪುರ ತಾಲೂಕಿನಲ್ಲಿ ನಡೆದಿದೆ.
ಮೃತರು ಟಿ.ನರಸೀಪುರದ ತಿರುಮಕೂಡಲಿನ ನಿವಾಸಿಗಳಾದ ಚೌಡಯ್ಯ (70) ಭರತ್ (13) ಧನುಷ್ (10) ಎಂದು ತಿಳಿದುಬಂದಿದೆ.
ತಾತನೊಂದಿಗೆ ಕಾವೇರಿ ನದಿ ತೀರಕ್ಕೆ ಬಂದಿದ್ದ ಇಬ್ಬರು ಮೊಮ್ಮಕ್ಕಳು ಆಕಸ್ಮಿಕವಾಗಿ ನದಿಗೆ ಇಳಿದಿದ್ದಾರೆ. ಈ ವೇಳೆ ಈಜು ಬಾರದೇ ನೀರಲ್ಲಿ ಮುಳುಗುತ್ತಿರುವ ಮೊಮ್ಮಕ್ಕಳನ್ನು ಕಂಡ ಅಜ್ಜ ಚೌಡಯ್ಯ, ರಕ್ಷಣೆ ಮಾಡಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಚೌಡಯ್ಯನವರಿಗೂ ಈಜು ಬಾರದ ಕಾರಣ ಮೊಮ್ಮಕ್ಕಳೊಂದಿಗೆ ಅವರ ಸಹ ಜಲಸಮಾಧಿಯಾಗಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮೂವರ ಶವವನ್ನು ಹೊರತೆಗೆದು ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಟಿ.ನರಸೀಪುರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.