ಮನೆ ಹಿಂಬಾಗದಲ್ಲಿದ್ದ ತಡೆಗೋಡೆಗೆ ಪಿಲ್ಲರ್ ನಿರ್ಮಾಣ ಮಾಡುವ ವೇಳೆ ಮಣ್ಣು ಕುಸಿದು ಓರ್ವ ಮಹಿಳೆ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸುಳ್ಯದ ಆಲೆಟ್ಟಿ ಗ್ರಾಮದಲ್ಲಿ ನಡೆದಿದೆ. ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಧರೆಯ ಮಣ್ಣು ಕುಸಿದಿತ್ತು. ಏಳು ಕೆಲಸಗಾರರ ಪೈಕಿ ನಾಲ್ವರು ಕೂಡಲೇ ದೂರ ಓಡಿಹೋಗಿ ಪಾರಾಗಿದ್ದರೆ, ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಜೆಸಿಬಿ ತರಿಸಿ ಮಣ್ಣು ತೆಗೆಸಿ ಮೃತ ದೇಹಗಳನ್ನು ಹೊರಗೆಳೆಯಲಾಗಿದೆ. ಮೃತ ದೇಹಗಳನ್ನು ತೆಗೆಯಲು ಒಂದು ತಾಸಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಲಾಯಿತು.
ಮೃತರನ್ನು ಗದಗ ಮೂಲದ ಸೋಮಶೇಖರ್ ರೆಡ್ಡಿ ಮತ್ತು ಅವರ ಪತ್ನಿ ಶಾಂತಕ್ಕ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಯುವಕನ ಹೆಸರು ಇನ್ನಷ್ಟೇ ತಿಳಿಯಬೇಕಿದೆ. ಘಟನಾ ಸ್ಥಳಕ್ಕೆ ಸಚಿವ ಎಸ್.ಅಂಗಾರ ಸೇರಿದಂತೆ ಸುಳ್ಯ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದಾರೆ.