ಕಲಬುರ್ಗಿ: ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಓರ್ವ ಮಹಿಳೆ ಹಾಗೂ ಇಬ್ಬರು ಮಕ್ಕಳು ದುರ್ಮರಣವನ್ನಪ್ಪಿರುವ ಘಟನೆ ಚಿಂಚೋಳಿಯ ಧನಗರ್ ಗಲ್ಲಿಯಲ್ಲಿ ಸಂಭವಿಸಿದೆ. ಝರಣಮ್ಮ (44), ಮಹೇಶ್ (18) ಮತ್ತು ಸುರೇಶ (16) ಮೃತ ದುರ್ದೈವಿಗಳು.
ಕಳೆದ ರಾತ್ರಿ ಧಾರಾಕಾರವಾಗಿ ಸುರಿದ ಅಕಾಲಿಕ ಮಳೆಗೆ ವಿದ್ಯುತ್ ತಂತಿ ತುಂಡಾಗಿ ರಸ್ತೆಯ ಮೇಲೆ ಬಿದ್ದಿತ್ತು. ದನಗಳಿಗೆ ಹಾಕುವ ಆಹಾರವನ್ನು ಸಂರಕ್ಷಿಸಲು ಝರಣಮ್ಮ ರಾತ್ರಿ ಮನೆಯಿಂದ ಹೊರಟಾಗ ಈ ದುರ್ಘಟನೆ ಸಂಭವಿಸಿದೆ. ಆಕೆಯ ಕೂಗು ಕೇಳಿ ಧಾವಿಸಿದ ಇಬ್ಬರೂ ಮಕ್ಕಳೂ ಸಹ ಇದೇ ವೇಳೆ ವಿದ್ಯುತ್ ಸ್ಪರ್ಶಕ್ಕೆ ಈಡಾಗಿ ಸಾವನ್ನಪ್ಪಿದ್ದಾರೆ. ಮೃತ ದೇಹಗಳನ್ನು ಚಿಂಚೋಳಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ಕುರಿತಂತೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.