ಬೆಳಗಾವಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೆಲವು ವಾರಗಳ ಹಿಂದೆ ಹಿಂಡಲಗಾ ಜೈಲಿನಿಂದ ಬೆದರಿಕೆ ಕರೆ ಬಂದಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವಾಗಲೇ, ಅದೇ ಸ್ಥಳದಿಂದ ಗಡ್ಕರಿ ಅವರ ಕಚೇರಿಗೆ ಮತ್ತೊಂದು ಬೆದರಿಕೆ ಕರೆ ಬಂದಿದೆ.
ಈ ಹಿನ್ನೆಲೆ ಗುರುವಾರ ತಡರಾತ್ರಿ (ಮಾರ್ಚ್ 23) ಮಹಾರಾಷ್ಟ್ರದ ಪೊಲೀಸ್ ಅಧಿಕಾರಿಗಳ ತಂಡ ಹಿಂಡಲಗಾ ಕಾರಾಗೃಹಕ್ಕೆ ಭೇಟಿ ನೀಡಿ, ತಪಾಸಣೆ ನಡೆಸಿದೆ.
ಮೂಲಗಳ ಪ್ರಕಾರ, ವ್ಯಕ್ತಿಯೊಬ್ಬರು ಗಡ್ಕರಿ ಅವರ ಕಚೇರಿಗೆ ಕರೆ ಮಾಡಿ ಕೋಟ್ಯಂತರ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗ್ತಿದೆ. ಅಷ್ಟೇಅಲ್ಲದೇ ಸಚಿವರ ಕಚೇರಿಯಲ್ಲಿ ಕರೆ ಸ್ವೀಕರಿಸಿದವರಿಗೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಮಂಗಳವಾರ ಗಡ್ಕರಿ ಅವರ ಕಚೇರಿಯಲ್ಲಿ ಫೋನ್ ಕರೆಯನ್ನು ಸ್ವೀಕರಿಸಲಾಗಿದೆ. ಅಲ್ಲದೇ ಆ ವ್ಯಕ್ತಿ ಗೂಗಲ್ ಪೇ ಮೂಲಕ ಹಣವನ್ನು ಪಾವತಿಸುವಂತೆ ಹೇಳಿದ್ದಾನಂತೆ.
ಅಲ್ಲದೇ ಹಣದ ಬೇಡಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದಂತೆ ಅನಾಮಧೇಯ ಕರೆ ಮಾಡಿದ ವ್ಯಕ್ತಿ ಎಚ್ಚರಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ. ಹಿಂಡಲಗಾ ಜೈಲಿನಿಂದ ಕರೆ ಮಾಡಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸರ ತಂಡ ಶಂಕಿಸಿದೆ. ಹಾಗಾಗಿ ಶುಕ್ರವಾರ ಜೈಲಿನೊಳಗೆ ಮೊಬೈಲ್ ಫೋನ್‌ಗಳನ್ನು ಹುಡುಕಲು ಪ್ರಯತ್ನಿಸಿದ್ದಾರೆ.