ಆದಿಚುಂಚನಗಿರಿ ಶ್ರೀಗಳ ಎಂಟ್ರಿಯಿಂದ ಉರಿಗೌಡ-ನಂಜೇಗೌಡ ವಿವಾದ ತಣ್ಣಗಾಯ್ತು ಎಂದುಕೊಳ್ಳುತ್ತಿರುವಾಗಲೇ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತೆ ವಿವಾದವನ್ನು ಕೆದಕಿದ್ದು, ಉರಿಗೌಡ-ನಂಜೇಗೌಡ ಪಾತ್ರಗಳನ್ನು ಕಾಲ್ಪನಿಕ ಎನ್ನುವವರು ಕ್ಷಮೆಯಾಚಿಸಬೇಕು ಎಂದಿದ್ದಾರೆ.
ನಿರ್ಮಲಾನಂದನಾಥರು ಈ ಬಗ್ಗೆ ಚರ್ಚೆ ಮಾಡಬಾರದು, ಸಮುದಾಯದಲ್ಲಿ ಗೊಂದಲ ಸೃಷ್ಟಿಸಬಾರದು ಎಂದು ಹೇಳಿದ್ದರಾದರೂ, ತಾವು ಈ ಬಗ್ಗೆ ಚರ್ಚೆಯನ್ನು ಮುಂದುವರೆಸುವುದಾಗಿ ಸಿಟಿ ರವಿ ಹೇಳಿದ್ದಾರೆ.
ನಾವು ಯಾರೂ ತಾಲಿಬಾನ್ ಗಳಲ್ಲ. ಪ್ರಜಾಪ್ರಭುತ್ವದ ಜನಪ್ರತಿನಿಧಿಗಳು, ನಾವು ಈ ಬಗ್ಗೆ ಚರ್ಚೆಯನ್ನು ಮುಂದುವರೆಸುತ್ತೇವೆ ಎಂದು ಸಿಟಿ ರವಿ ಹೇಳಿದ್ದಾರೆ.
ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಮಾತನಾಡಿದ ಅವರು ʼಸ್ವಾಮೀಜಿ ಬಳಿ ದಾಖಲೆ ಕೊಂಡು ಹೋಗುತ್ತೇವೆ, ಪ್ರಜಾಪ್ರಭುತ್ವದಲ್ಲಿ ಚರ್ಚೆಯಾಗಬೇಕು. ಉರಿಗೌಡ, ನಂಜೇಗೌಡರ ಬಗ್ಗೆ ದಾಖಲೆ ಸಂಗ್ರಹಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಮಾಜಿ ಸಿಎಂ ಹೆಚ್‌ಡಿಕೆ ಆದಿಚುಂಚನಗಿರಿ ಶ್ರೀಗಳಿಗೆ ಅಪಮಾನ ಮಾಡಿದ್ದಾರೆ, ಅವರು ಕ್ಷಮೆಯಾಚನೆ ಮಾಡಬೇಕು ಎಂದು ಸಿಟಿ ರವಿ ಇದೇ ವೇಳೆ ಹೇಳಿದ್ದಾರೆ.
ಸಚಿವ ಮುನಿರತ್ನ ಅವರು ಉರಿಗೌಡ-ನಂಜೇಗೌಡರ ಚಿತ್ರ ನಿರ್ಮಿಸಲು ಮುಂದಾದಾಗ ಆದಿಚುಂಚನಗಿರಿ ಮಠದ ಶ್ರೀಗಳು ಕರೆದು ಮಾತನಾಡಿ, ಸಿನೆಮಾ ನಿರ್ಮಿಸದಂತೆ ತಾಕೀತು ಮಾಡಿದ್ದರು, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಲ್ಪನೆಯನ್ನು ಇಟ್ಟುಕೊಂಡು ಕಾದಂಬರಿ ಬರೆಯಬಹುದು, ಇತಿಹಾಸ ಕಟ್ಟೋಕೆ ಆಗಲ್ಲ, ಉರಿಗೌಡ-ನಂಜೇಗೌಡರ ಚರ್ಚೆ ನಿಲ್ಲಿಸಬೇಕು, ಗೊಂದಲ ಸೃಷ್ಟಿಸಬಾರದು ಎಂದು ಹೇಳಿದ್ದರು.