ಮುಸ್ಲಿಂ ಧಾರ್ಮಿಕ ಮುಖಂಡರ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ರಾಮನವಮಿ ಸಂದರ್ಭದಲ್ಲಿ ನಡೆದ ಕೋಮು ಹಿಂಸಾಚಾರ ಮತ್ತು ದ್ವೇಷದ ಭಾಷಣಗಳ ಬಗ್ಗೆ ಅಮಿತ್ ಶಾ ಅವರು ಮೌನವಹಿಸದಂತೆ ಅವರಲ್ಲಿ ಮನವಿ ಮಾಡಿದೆ.
ದೇಶದಲ್ಲಿ ಪ್ರಸ್ತುತ ಎದುರಿಸುತ್ತಿರುವ 14 ಸವಾಲುಗಳ ಬಗ್ಗೆ ಗೃಹ ಸಚಿವರೊಂದಿಗೆ ಚರ್ಚಿಸಲಾಗಿದೆ. ಅದರಲ್ಲಿ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದಲ್ಲಿ ಇತ್ತೀಚಿಗೆ ನಡೆದ ಕೋಮು ಹಿಂಸಾಚಾರದ ವಿಷಯಗಳೂ ಸೇರಿದೆ ಎಂದು ನಿಯೋಗವು ಹೇಳಿದೆ.
ನಾವು ರಾಜಕೀಯ ಭಾಷಣಗಳಲ್ಲಿ ಕಾಣುವ ಅಮಿತ್ ಶಾರಿಗಿಂತ ವಿಭಿನ್ನವಾದ ಅಮಿತ್ ಶಾ ರನ್ನು ನಾವು ನೋಡಿದೆವು, ಅವರು ನಮ್ಮ ಮಾತುಗಳನ್ನು ಆಲಿಸುತ್ತಿದ್ದರು, ಯಾವುದನ್ನೂ ನಿರಾಕರಿಸಲಿಲ್ಲ ಎಂದು ನಿಯೋಗದಲ್ಲಿದ್ದ ಮುಖಂಡ ನಿಯಾಝ್ ಫಾರೂಕಿ ಹೇಳಿದ್ದಾರೆ.
ಬಿಹಾರದ ನಳಂದಾದಲ್ಲಿ ಮದರಸಾವೊಂದಕ್ಕೆ ಬೆಂಕಿ ಹಚ್ಚಿದ ಘಟನೆಯನ್ನು ಮುಸ್ಲಿಂ ಮುಖಂಡರು ಪ್ರಸ್ತಾಪಿಸಿದ್ದಾರೆ ಎಂದು ಫಾರೂಕಿ ಹೇಳಿದ್ದಾರೆ.
ಗೋರಕ್ಷಕರಿಂದ ಹತ್ಯೆಗೀಡಾದ ರಾಜಸ್ಥಾನದ ಜುನೈದ್ ಮತ್ತು ನಾಸಿರ್ ಹತ್ಯೆಯ ಬಗ್ಗೆಯೂ ಚರ್ಚೆ ನಡೆದಿದೆ. ಬಿಜೆಪಿ ನಾಯಕರ ದ್ವೇಷದ ಭಾಷಣಗಳ ಬಗ್ಗೆಯೂ ಅವರ ಬಳಿ ಚರ್ಚಿಸಲಾಗಿದೆ ಎಂದು ಮುಸ್ಲಿಂ ಮುಖಂಡರು ಹೇಳಿದ್ದಾರೆ.
ಇಂತಹ ವಿಷಯಗಳಲ್ಲಿ ನೀವು (ಸರ್ಕಾರ) ಮೌನವಹಿಸುವುದು ಮುಸ್ಲಿಮರ ನಿರಾಶೆಗೆ ಕಾರಣವಾಗುತ್ತದೆ ಎಂದು ನಾವು ಹೇಳಿದ್ದೇವೆ, ಅದಕ್ಕೆ ಅವರು ಪರಿಶೀಲಿಸುವ ಭರವಸೆ ನೀಡಿದ್ದಾರೆ ಎಂದು ಫಾರೂಕಿ ಹೇಳಿದ್ದಾರೆ.