ಪೋಲೀಸರ ಸೋಗಿನಲ್ಲಿ ಬಂದು ಚಿನ್ನದ ವ್ಯಾಪಾರಿಗಳನ್ನು ವಿಚಾರಣೆಯ ನೆಪದಲ್ಲಿ 2 ಕೆಜಿ ಚಿನ್ನದ ಗಟ್ಟಿಯನ್ನು ಹೊತ್ತೊಯ್ದಿರುವ ಘಟನೆ ಉಪ್ಪಾರ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಯಚೂರು ಮೂಲದ ಅಬ್ದುಲ್ ರಜಾಕ್ ಎಂಬ ಯುವಕ ಉದ್ಯಮಿ ಖಾದಿರ್ ಪಾಷ ಅವರ ಬಳಿ ಕೆಲಸ ಮಾಡಿಕೊಂಡಿದ್ದ. ಚಿನ್ನದ ಉದ್ಯಮಿಯಾಗಿದ್ದ ಖಾದಿರ್ ಪಾಷ ತನ್ನ ಕೆಲಸಗಾರರ ಬಳಿ ಹಣ ಕೊಟ್ಟು ಬೆಂಗಳೂರಿಗೆ ಕಳಿಸಿ ಚಿನ್ನವನ್ನು ತರಿಸಿಕೊಳ್ಳುತ್ತಿದ್ದರು. ಕಳೆದ ಶುಕ್ರವಾರ ಒಂದು ಕೋಟಿಗೂ ರೂ.ಗೂ ಹೆಚ್ಚು ಹಣವನ್ನು ನೀಡಿದ್ದ ಖಾದಿರ್ ಚಿನ್ನ ತರುವಂತೆ ಅಬ್ದುಲ್ ರಜಾಕ್, ಮಲ್ಲಯ್ಯ, ಸುನಿಲ್ ಕುಮಾರ್ ಎಂಬುವವರನ್ನು ಬೆಂಗಳೂರಿಗೆ ಕಳಿಸಿದ್ದರು. ಶನಿವಾರ ಬೆಂಗಳೂರಿನ ರಾಜಾ ಮಾರ್ಕೆಟ್ ನಲ್ಲಿ ಚಿನ್ನ ಖರೀದಿಸಿದ್ದ ಈ ಮೂವರು ಅದೇ ದಿನದಂದು ವಾಪಾಸ್ ರಾಯಚೂರಿಗೆ ತೆರಳಲು ಮುಂದಾಗಿದ್ದರು. ಅಬ್ದುಲ್ ರಜಾಕ್ ಮತ್ತು ಮಲ್ಲಯ್ಯ ಚಿನ್ನದ ಗಟ್ಟಿ ಇದ್ದ ಚೀಲದೊಡನೆ ಶೌಚಾಲಯಕ್ಕೆಂದು ತೆರಳಿದಾಗ ಅಲ್ಲಿಗೆ ಬಂದ ಇಬ್ಬರು ಅಪರಿಚಿತರು, ಮೂರು ತಿಂಗಳಿನಿಂದ ನಿಮ್ಮನ್ನು ಗಮನಿಸುತ್ತಿದ್ದೇವೆ. ಅಕ್ರಮ ದಂಧೆ ಮಾಡುತ್ತಿದ್ದೀರಾ ಎಂದು ಗದರಿಸಿ ಆಟೋದಲ್ಲಿ ಕರೆದೊಯ್ದಿದ್ದರು ಬಳಿಕ ಇಬ್ಬರನ್ನೂ ಬೇರೆ ಬೇರೆ ಸ್ಥಳಗಳಲ್ಲಿ ಇಳಿಸಿ ಚಿನ್ನದ ಗಟ್ಟಿ ಮತ್ತು ನಗದು ಹಣದೊಂದಿಗೆ ಪರಾರಿಯಾಗಿದ್ದಾರೆ.
ಈ ಸಂಬಂಧ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಆರೋಪಿಗಳ ಚಲನ ವಲನಗಳು ಸಿಸಿಟಿವಿ ಕೆಮೆರಾದಲ್ಲಿ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹಣಕಾಸಿನ ವ್ಯವಹಾರದ ಬಗ್ಗೆ ಉದ್ಯಮಿಯ ಬಳಿಯೂ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ