ದಾವಣಗೆರೆ: ರಾಜ್ಯದಲ್ಲಿ ಕೃಷಿಗೆ 7 ಗಂಟೆಗಳ ತ್ರಿಫೇಸ್ ವಿದ್ಯುತ್ ಹಾಗೂ ಗೃಹಬಳಕೆ ಮತ್ತು ಕೈಗಾರಿಕೆ ಉದ್ದೇಶಗಳಿಗೆ 24 ಗಂಟೆ ವಿದ್ಯುತ್ ಪೂರೈಕೆ ಮಾಡುವುದು ಕಾಂಗ್ರೆಸ್ ಸರ್ಕಾರದ ನೀತಿಯಾಗಿದ್ದು, ಇದಕ್ಕೆ ನಾವು ಬದ್ದವಾಗಿದ್ದೇವೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ದಾವಣಗೆರೆಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂಧನ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕರೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇನ್ನು ಬೇಸಿಗೆ ಸಮೀಪಿಸುತ್ತಿದ್ದು, ರಾಜ್ಯದಲ್ಲಿ ಯಾವುದೇ ರೀತಿ ವಿದ್ಯುತ್ ಕೊರತೆ ಇಲ್ಲ, ಕೇವಲ ಕೆಲವೊಂದು ತಾಂತ್ರಿಕ ಸಮಸ್ಯೆಯ ಕಾರಣ ಕೆಲ ಸ್ಥಳಗಳಲ್ಲಿ ನಿರ್ವಹಣೆಗಾಗಿ ಕೆಲವೊಮ್ಮೆ ವಿದ್ಯುತ್ ಕಡಿತ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಈಗಿನ ಪರಿಸ್ಥಿತಿಗೆ ಅನುಗುಣವಾಗಿ ರಾಜ್ಯದಲ್ಲಿ ದಿನನಿತ್ಯ 18500 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದೆ. ಇನ್ನೇನು ಬೇಸಿಗೆ ಸಮೀಪದಲ್ಲಿ ಇರುವುದರಿಂದ ಈ ಸರಾಸರಿಗಿಂತ ಶೇ 10 ರಷ್ಟು ವಿದ್ಯುತ್ ಬೇಡಿಕೆ ಹೆಚ್ಚಿದೆ. ಹೀಗಾಗಿ ಈ ಬೇಡಿಕೆ ಪೂರೈಸಲು ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ವಿದ್ಯುತ್ ಬ್ಯಾಂಕಿಂಗ್ ಮಾಡಿಕೊಳ್ಳಲು ಯೋಜಿಸಲಾಗಿದೆ.