Thursday, July 16, 2026
Homeಟಾಪ್ ನ್ಯೂಸ್WEST BENGAL: ಟಿಎಂಸಿ ಬಂಡಾಯ ಸಂಸದರು NCPI ಜೊತೆ ವಿಲೀನ.. ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ?

WEST BENGAL: ಟಿಎಂಸಿ ಬಂಡಾಯ ಸಂಸದರು NCPI ಜೊತೆ ವಿಲೀನ.. ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ?

ನವದೆಹಲಿ: ಪಶ್ಚಿಮ ಬಂಗಾಳದ (West Bengal) ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಎದ್ದಿರುವ ಆಂತರಿಕ ಬಂಡಾಯ ಈಗ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಟಿಎಂಸಿಯ ಎಲ್ಲಾ ಬಂಡಾಯ ಸಂಸದರು ಶೀಘ್ರದಲ್ಲೇ ನ್ಯಾಶನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI) ರಾಜಕೀಯ ಪಕ್ಷದೊಂದಿಗೆ ವಿಲೀನಗೊಂಡು, ಕೇಂದ್ರದ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (NDA) ಬೆಂಬಲ ಘೋಷಿಸಲಿದ್ದಾರೆ ಅಂತಾ ಹೇಳಲಾಗುತ್ತಿದೆ.ಒಂದು ವೇಳೆ ಈ ರಾಜಕೀಯ ವಿಲೀನ ಪ್ರಕ್ರಿಯೆ ಅಧಿಕೃತವಾಗಿ ಪೂರ್ಣಗೊಂಡರೆ, ಸಂಸತ್‌ನಲ್ಲಿ ಟಿಎಂಸಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗಲಿದ್ದು, ಪಶ್ಚಿಮ ಬಂಗಾಳದ ರಾಜಕೀಯ ಸಮೀಕರಣವೇ ಬದಲಾಗಲಿದೆ.

ಬಿಜೆಪಿ ನಾಯಕರೊಂದಿಗೆ ರಹಸ್ಯ ಸಭೆ

ಟಿಎಂಸಿಯ ಬಂಡಾಯ ಸಂಸದರು ಇತ್ತೀಚೆಗಷ್ಟೇ ಕೇಂದ್ರ ಸಚಿವ ಭೂಪೇಂದರ್ ಯಾದವ್ ಅವರೊಂದಿಗೆ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಈ ಉನ್ನತ ಮಟ್ಟದ ಸಭೆಯಲ್ಲಿ ತ್ರಿಪುರಾದ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಸ್ತುತ ಬಿಜೆಪಿ ಸಂಸದ ಬಿಪ್ಲಬ್ ಕುಮಾರ್ ದೇವ್ ಕೂಡ ಉಪಸ್ಥಿತರಿದ್ದರು ಎನ್ನಲಾಗಿದೆ. ಈ ಸಭೆಯಲ್ಲೇ ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಲು ಎನ್‌ಸಿಪಿಐ (NCPI) ಪಕ್ಷದೊಂದಿಗೆ ವಿಲೀನಗೊಳ್ಳುವ ಪ್ರಸ್ತಾವನೆಯ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಹೇಳಲಾಗಿದೆ.

ಯಾವುದು ಈ ನ್ಯಾಶನಲಿಸ್ಟ್ ಸಿಟಿಜನ್ಸ್ ಪಾರ್ಟಿ?
ಟಿಎಂಸಿ ಬಂಡಾಯಗಾರರು ಆಶ್ರಯ ಪಡೆಯಲು ಮುಂದಾಗಿರುವ ನ್ಯಾಶನಲಿಸ್ಟ್ ಸಿಟಿಜನ್ಸ್ ಪಾರ್ಟಿ ಈಶಾನ್ಯ ಭಾರತದಲ್ಲಿ ಪ್ರಭಾವ ಹೊಂದಿದೆ. ಈ ಪಕ್ಷವು ಪ್ರಮುಖವಾಗಿ ಅಸ್ಸಾಂ, ತ್ರಿಪುರಾ, ಪಶ್ಚಿಮ ಬಂಗಾಳ ಮತ್ತು ಈಶಾನ್ಯದ ಇತರ ರಾಜ್ಯಗಳಲ್ಲಿ ಸಕ್ರಿಯವಾಗಿದೆ. ಈ ಹಿಂದೆ ತ್ರಿಪುರಾ ವಿಧಾನಸಭಾ ಚುನಾವಣೆಗಳಲ್ಲಿ ಈ ಪಕ್ಷ ಸ್ಪರ್ಧಿಸಿದೆ. ವಿಶೇಷವಾಗಿ 2023ರ ತ್ರಿಪುರಾ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಉನಕೋಟಿ ಜಿಲ್ಲೆಯ ಕೈಲಾಶಹರ್ ಕ್ಷೇತ್ರದಿಂದ ಜಹಾಂಗೀರ್ ಅಲಿ ಅವರು ನ್ಯಾಶನಲಿಸ್ಟ್ ಸಿಟಿಜನ್ಸ್ ಪಾರ್ಟಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು.

ಅಧಿಕೃತ ಪ್ರಕಟಣೆಯಷ್ಟೇ ಬಾಕಿ

ಟಿಎಂಸಿ ಸಂಸದರು ಮತ್ತು ಶಾಸಕರ ದೊಡ್ಡ ಗುಂಪೇ ದೀದಿ ವಿರುದ್ಧ ದಂಗೆ ಎದ್ದಿರುವುದರಿಂದ ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಬಿರುಗಾಳಿ ಎದ್ದಿದೆ. ಸದ್ಯಕ್ಕೆ ಈ ವಿಲೀನದ ಪ್ರಸ್ತಾವನೆಗೆ ಸಂಬಂಧಿಸಿದಂತೆ ಟಿಎಂಸಿ ಬಂಡಾಯ ನಾಯಕರಿಂದಾಗಲಿ ಅಥವಾ ನ್ಯಾಶನಲಿಸ್ಟ್ ಸಿಟಿಜನ್ಸ್ ಪಾರ್ಟಿಯ ಉನ್ನತ ಮಟ್ಟದ ಪದಾಧಿಕಾರಿಗಳಿಂದಾಗಲಿ ಯಾವುದೇ ಪ್ರಕಟಣೆ ಹೊರಬಿದ್ದಿಲ್ಲ. ಆದರೆ, ಲೋಕಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಬಲ ಹೆಚ್ಚಿಸಲು ಈ ತೆರೆಮರೆಯ ರಾಜಕೀಯ ತಂತ್ರಗಾರಿಕೆ ನಡೆದಿದೆ ಎನ್ನಲಾಗುತ್ತಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!