ಯಾದಗಿರಿ: ರಾಜಕಾರಣದಿಂದ ಹತ್ತಿರದ ಸಂಬಂಧಗಳು ದೂರವಾಗಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಮಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದ ವ್ಯಕ್ತಿ ತನ್ನ ಅಳಿಯ ಬಿಜೆಪಿ ಪಕ್ಷಕ್ಕೆ ಬಂದರೆ ಮಾತ್ರ, ತನ್ನ ಮಗಳನ್ನು ಗಂಡನ ಮನೆಗೆ ಕಳುಹಿಸುವುದಾಗಿ ಷರತ್ತು ಹಾಕಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಸೊನ್ನಾಪುರ ತಾಂಡಾದಲ್ಲಿ ನಡೆದಿದೆ.
ಪರಶುರಾಮ ಚವ್ಹಾಣ ಅಳಿಯ. ಮಾವ ಚಂದ್ರು. ಪರಶುರಾಮ ಚವ್ಹಾಣ ಪತ್ನಿ ಹೆರಿಗೆಗೆಂದು ತಂದೆ ಮನೆಗೆ ಬಂದಿದ್ದಾರೆ. ಹೆರಿಗೆಯಾಗಿ ಒಂದೂವರೆ ತಿಂಗಳಾಗಿದ್ದು, ಮನೆಗೆ ಕಳುಹಿಸುವಂತೆ ಅಳಿಯ ಮಾವನಿಗೆ ಕೇಳಿದ್ದನಂತೆ. ಆದರೆ ಈ ವೇಳೆ ಮಗಳನ್ನು ಕಳುಹಿಸಬೇಕಾದರೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರುವಂತೆ ಅಳಿಯನಿಗೆ ಮಾವ ಷರತ್ತು ಹಾಕಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಅಳಿಯ ಪರಶುರಾಮ ಚವ್ಹಾಣ, ನಾನು ಕಾಂಗ್ರೆಸ್ ಕಾರ್ಯಕರ್ತ. ಬಿಜೆಪಿಗೆ ಸೇರ್ಪಡೆಯಾಗು, ಮಗಳನ್ನು ಕಳುಹಿಸುತ್ತೇನೆ ಅಂತ ಮಾವ ಹೇಳಿದ್ದಾನೆ. ರಾಜಕೀಯ ಬಿಟ್ಟು ಹೆಂಡತಿ, ಮಕ್ಕಳನ್ನು ಕಳುಹಿಸಿ ನನ್ನ ಪಾಡಿಗೆ ನಾನು ಚೆನ್ನಾಗಿರುತ್ತೇನೆಂದು ಹೇಳಿದೆ. ಆದರೂ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರಲು ಮಾವ ಹೇಳ್ತಿದ್ದಾರೆ. ನಾನು ಮಾತ್ರ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು, ಅಳಿಯನ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಮಾವ ಚಂದ್ರು, ನಾನು ಅಳಿಯನಿಗೆ ಯಾವುದೇ ಷರತ್ತು ಹಾಕಿಲ್ಲ. ಅಲ್ಲದೆ, ನಾನು ಬಿಜೆಪಿಯಲ್ಲಿದ್ದೇನೆ, ಅಳಿಯ ಕಾಂಗ್ರೆಸ್ ನಲ್ಲಿದ್ದಾನೆ. ಆದರೆ ನಾನು ಆ ರೀತಿ ಹೇಳಿಯೇ ಇಲ್ಲ. ಮುಂದಿನ ದಿನಗಳಲ್ಲಿ ಮಗಳನ್ನು ಅಳಿಯನ ಮನೆಗೆ ಕಳುಹಿಸುತ್ತೇನೆ ಎಂದಿದ್ದಾರೆ.