Thursday, July 16, 2026
Homeಕ್ರೈಂTELEGRAM : ಸಿನಿಮಾ, ಒಟಿಟಿ ಪೈರಸಿ ತಡೆಗೆ ಕೇಂದ್ರ ಬ್ರೇಕ್: ಟೆಲಿಗ್ರಾಂ ಸಂಸ್ಥೆಗೆ ನೋಟಿಸ್ ಜಾರಿ!

TELEGRAM : ಸಿನಿಮಾ, ಒಟಿಟಿ ಪೈರಸಿ ತಡೆಗೆ ಕೇಂದ್ರ ಬ್ರೇಕ್: ಟೆಲಿಗ್ರಾಂ ಸಂಸ್ಥೆಗೆ ನೋಟಿಸ್ ಜಾರಿ!

ಬೆಂಗಳೂರು: ಸಿನಿಮಾ ಮತ್ತು ಒಟಿಟಿ (OTT) ಲೋಕದ ಅತಿ ದೊಡ್ಡ ಪಿಡುಗಾಗಿರುವ ಪೈರಸಿ (Piracy ) ತಡೆಗೆ ಕೇಂದ್ರ ಸರ್ಕಾರ ಚಾಟಿ ಬೀಸಿದೆ. ಟೆಲಿಗ್ರಾಂ (Telegram) ಮೂಲಕ ಹೊಸ ಸಿನಿಮಾಗಳು ಹಾಗೂ ವೆಬ್ ಸೀರೀಸ್‌ಗಳು ಲೀಕ್ ಆಗ್ತಿರೋ ಪರಿಗಣಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.

ಜಿಯೋ ಸಿನಿಮಾ, ಅಮೆಜಾನ್ ಪ್ರೈಮ್ ಸೇರಿದಂತೆ ಪ್ರಮುಖ ಒಟಿಟಿ ಸಂಸ್ಥೆಗಳು ಹಾಗೂ ಚಿತ್ರ ನಿರ್ಮಾಪಕರ ಸಂಘ ನೀಡಿದ ಜಂಟಿ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಪೈರಸಿ ದಂಧೆಯಿಂದಾಗಿ ಚಿತ್ರರಂಗಕ್ಕೆ ಪ್ರತಿವರ್ಷ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದ್ದು, ಇದನ್ನು ತಡೆಯಲು ನೇರವಾಗಿ ಪ್ಲಾಟ್‌ಫಾರ್ಮ್ ಸಂಸ್ಥೆಯನ್ನೇ ಹೊಣೆಗಾರರನ್ನಾಗಿ ಮಾಡಲು ಸರ್ಕಾರ ಮುಂದಾಗಿದೆ.

ಕೇಂದ್ರ ಸರ್ಕಾರವು ಪೈರಸಿ ಕಂಟೆಂಟ್ ಹಂಚಿಕೊಳ್ಳುತ್ತಿದ್ದ ಸುಮಾರು 3,142 ಟೆಲಿಗ್ರಾಂ ಚಾನೆಲ್‌ಗಳನ್ನು ಗುರುತಿಸಿದ್ದು, ಅವುಗಳನ್ನು ತಕ್ಷಣವೇ ನಿಷೇಧಿಸುವಂತೆ ಸೂಚಿಸಿದೆ. ಇದರೊಂದಿಗೆ, ಪೈರಸಿ ತಡೆಗೆ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳ ಕುರಿತು 15 ದಿನಗಳ ಒಳಗಾಗಿ ವಿಸ್ತೃತ ವರದಿಯನ್ನು (Action Taken Report) ಸಲ್ಲಿಸಬೇಕು ಎಂದು ಟೆಲಿಗ್ರಾಂ ಸಂಸ್ಥೆಗೆ ಅಂತಿಮ ಗಡುವು ನೀಡಲಾಗಿದೆ.

ಐಟಿ ನಿಯಮಗಳು 2021ರ ಅಡಿಯಲ್ಲಿ ಟೆಲಿಗ್ರಾಂ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಐಟಿ ಕಾಯ್ದೆಯಡಿ ಲಭ್ಯವಿರುವ ‘ಸುರಕ್ಷಿತ ರಕ್ಷಣೆ’ (Safe Harbour) ಸೌಲಭ್ಯವನ್ನು ಹಿಂಪಡೆದು, ಸಂಸ್ಥೆಯ ವಿರುದ್ಧವೇ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.

ಇದನ್ನೂ ಓದಿ : ರಾಮ ಮಂದಿರದ ಚಿನ್ನ ಕರಗಿಸಿ ಬಿಸ್ಕೆಟ್ ಮಾಡಲಾಯಿತೇ? ಕಳ್ಳತನ ಪ್ರಕರಣದಲ್ಲಿ ಪೊಲೀಸರಿಂದ ಹೊಸ ಆಯಾಮದ ತನಿಖೆ!

ಹೆಚ್ಚಿನ ಸುದ್ದಿ

Change Language »
error: Content is protected !!