ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರನ್ನು ರಾಜ್ಯ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್ ನ ಕರೀಮ್‌ನಗರದಲ್ಲಿರುವ ನಿವಾಸದಿಂದ ಸಂಜಯ್ ಕುಮಾರ್ ಅವರನ್ನು ಬುಧವಾರ ತಡರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಮೇಲೆ ಪೊಲೀಸರು ಅವರನ್ನು ಬಂಧಿಸಿದ್ದಾರೆ. 10ನೇ ತರಗತಿಯ ಹಿಂದಿ ಪರೀಕ್ಷೆ ಸೋಮವಾರ ಬೆಳಗ್ಗೆ 9:30ಕ್ಕೆ ಆರಂಭಗೊಂಡಿದ್ದು, ಬೆಳಗ್ಗೆ 10 ಗಂಟೆ ವೇಳೆಗೆ ಪ್ರಶ್ನೆ ಪತ್ರಿಕೆಯ ಫೋಟೋಗಳು ರಾಜ್ಯಾದ್ಯಂತ ಹರಿದಾಡಿತ್ತು.
ಹನಮಕೊಂಡದ ಕಮಲಾಪುರದ ಪರೀಕ್ಷಾ ಕೇಂದ್ರದಿಂದ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಅಪ್ರಾಪ್ತ ಬಾಲಕನೊಬ್ಬ ಪರೀಕ್ಷೆ ಬರೆಯುತ್ತಿದ್ದ ತನ್ನ ಗೆಳೆಯನಿಂದ ಪ್ರಶ್ನೆ ಪತ್ರಿಕೆಯನ್ನು ಪಡೆದು, ತನ್ನ ಮತ್ತೊಬ್ಬ ಸ್ನೇಹಿತನಿಗೆ ಕಳುಹಿಸಿದ್ದಾನೆ. ಆತ ಆ ಫೋಟೋಗಳನ್ನು ವಾಟ್ಸಾಪ್ ಗುಂಪಿಗೆ ರವಾನಿಸಿದ್ದಾನೆ. ಕಾಕತೀಯ ವೈದ್ಯಕೀಯ ಕಾಲೇಜಿನ (ಕೆಎಂಸಿ) ಉದ್ಯೋಗಿಯೊಬ್ಬರು ಅದನ್ನು ಮಾಜಿ ಪತ್ರಕರ್ತ ಪಿ ಪ್ರಶಾಂತ್‌ಗೆ ರವಾನಿಸಿದ್ದಾರೆ, ಅವರು ಅದನ್ನು ಪತ್ರಕರ್ತರ ಗುಂಪಿಗೆ ಹಾಗೂ ಬಂಡಿ ಸಂಜಯ್‌ಗೆ ರವಾನಿಸಿದ್ದಾರೆ” ಎಂದು ವಾರಂಗಲ್ ಪೊಲೀಸ್ ಕಮಿಷನರ್ ರಂಗನಾಥ್ ಹೇಳಿದ್ದಾರೆ.
ಏ.8ರಂದು ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣಕ್ಕೆ ಭೇಟಿ ನೀಡಲಿರುವ ಕ. ಇದಕ್ಕೂ ಮುನ್ನ ಸಂಜಯ್ ಕುಮಾರ್ ಅವರನ್ನು ಬಂಧಿಸಿರುವುದಕ್ಕೆ ಬೆಂಬಲಿಗರು ಹಾಗೂ ಪಕ್ಷದ ಖಂಡನೆ ವ್ಯಕ್ತಪಡಿಸಿದ್ದಾರೆ.