Wednesday, December 4, 2024
Homeಕ್ರೈಂACCIDENT : ಅಮಲಿನಲ್ಲಿದ್ದ ಯುವಕ ಟೆಕ್ಕಿ ಸಂಧ್ಯಾ ಪ್ರಾಣವನ್ನೇ ತೆಗೆದ - ಘಟನೆ ಹೇಗಾಯ್ತು?...

ACCIDENT : ಅಮಲಿನಲ್ಲಿದ್ದ ಯುವಕ ಟೆಕ್ಕಿ ಸಂಧ್ಯಾ ಪ್ರಾಣವನ್ನೇ ತೆಗೆದ – ಘಟನೆ ಹೇಗಾಯ್ತು? ಆಮೇಲೇನಾಯ್ತು?

ಬೆಂಗಳೂರು : ನಗರದ ಕೆಂಗೇರಿ ಬಸ್ ನಿಲ್ದಾಣದ ಬಳಿ ನವೆಂಬರ್ 2ರಂದು ನಡೆದ ಭೀಕರ ರಸ್ತೆ ಅಪಘಾತ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಕೆಲಸ ಮುಗಿಸಿ ಮನೆ ಕಡೆ ಹೊರಟಿದ್ದ ಅಮಾಯಕ ಜೀವವೊಂದು ತನ್ನದಲ್ಲದ ತಪ್ಪಿಗೆ ರಸ್ತೆಯಲ್ಲಿ ಹೆಣವಾಗಿ ಹೋಗಿದೆ.

ದುಡ್ಡು, ಅಂತಸ್ತು, ಮೋಜು-ಮಸ್ತಿ, ಎಣ್ಣೆಯ ಅಮಲಿನಲ್ಲಿ ತೇಲುತ್ತಿದ್ದ ದುರುಳನೊಬ್ಬ,30 ವರ್ಷದ ಟೆಕ್ಕಿ ಸಂಧ್ಯಾರಿಗೆ ಐಷಾರಾಮಿ ಬೆನ್ಜ್‌ ಕಾರಿನಲ್ಲಿ ಡಿಕ್ಕಿ ಹೊಡೆದು ಪ್ರಾಣ ಬಲಿಪಡೆದಿದ್ದಾನೆ.

ಘಟನೆ ವಿವರ

ನವೆಂಬರ್ 2ರ ಸಂಜೆ 6.45ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಆರೋಪಿ ಧನುಷ್ ಸಂಪೂರ್ಣ ಪಾನಮತ್ತನಾಗಿ ಬೆನ್ಜ್‌ ಕಾರು ಚಾಲನೆ ಮಾಡಿಕೊಂಡು ಬರುವ ವೇಳೆ ಕೆಂಗೇರಿ ಬಸ್ ನಿಲ್ದಾಣದ ಬಳಿ ಸಂಧ್ಯಾ ರಸ್ತೆ ಕ್ರಾಸ್ ಮಾಡುತ್ತಿದ್ದರು. ಇದೇ ವೇಳೆ ಅತಿ ವೇಗವಾಗಿ ಯಮ ಸ್ವರೂಪದಲ್ಲಿ ಬಂದ ಬೆನ್ಜ್ ಕಾರು ಸಂಧ್ಯಾಗೆ ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ಕ್ಷಣಮರದಲ್ಲೇ ಗಾಳಿಯಲ್ಲಿ ಮೇಲೆ ಹಾರಿದ ಸಂಧ್ಯಾ ಅವರ ದೇಹವೇ ಸಂಪೂರ್ಣ ಛಿದ್ರವಾಗಿದೆ.

ಆ ದಿನ ಸಂಧ್ಯಾ ಪಾಪ.. ಕೆಲಸ ಮುಗಿಸಿ ಮನೆಗೆ ಹೊರಟಿದ್ದರಷ್ಟೇ, ಕೆಂಗೇರಿ ಬಸ್ ನಿಲ್ದಾಣದ ಬಳಿಯೇ ಯಮರಾಯ ಕಾದುಕುಳಿತಿದ್ದ. ಕಾರು ಗುದ್ದಿದ ರಭಸಕ್ಕೆ ಸಂಧ್ಯಾ ಅವರ ದೇಹ ಮೇಲಕ್ಕೆ ಹಾರಿ ನೆಲಕ್ಕೆ ಅಪ್ಪಳಿಸಿದ್ದರಿಂದ ತೀವ್ರ ರಕ್ತಸ್ರಾವವಾಗಿದೆ. ಈ ಕೂಡಲೇ ಸಂಧ್ಯಾ ಸ್ನೇಹಿತರು, ಸ್ಥಳೀಯರು ಅವರನ್ನು ಸಮೀಪದ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಶೆಯಲ್ಲಿದ್ದ ಧನುಷ್ ನ ಎಣ್ಣೆ ಮತ್ತು ಇಳಿದಿಲ್ಲ. ಕೇವಲ ಸಂಧ್ಯಾ ಒಬ್ಬರಿಗೇ ಮಾತ್ರವಲ್ಲ, ಆ ನಂತರ ಮುಂದೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೂ ಬೆನ್ಜ್‌ ಕಾರು ಡಿಕ್ಕಿ ಹೊಡೆದಿದೆ. ದ್ವಿಚಕ್ರ ವಾಹನದಲ್ಲಿ ಹೋಗ್ತಿದ್ದ ಸೈಯ್ಯದ್ ಎಂಬ ವ್ಯಕ್ತಿಗೂ ಗಾಯಗಳಾಗಿದ್ದು, ಕುಡಿದ ಮತ್ತಲ್ಲಿ ಅತಿವೇಗವಾಗಿ ಚಾಲನೆ ಮಾಡಿದ್ದೇ ಈ ದುರಂತಕ್ಕೆ ಕಾರಣವಾಗಿದೆ.

ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾದ ನಂತರ ಎಣ್ಣೆ ಮತ್ತಿನಲ್ಲಿದ್ದ ಆರೋಪಿ ಧನುಷ್ ಮತ್ತು ಅವನ ಎಣ್ಣೆ ಗ್ಯಾಂಗ್ ಸ್ನೇಹಿತರು ಸ್ಥಳದಿಂದ ಎಸ್ಕೇಪ್ ಆಗಲು ಟ್ರೈ ಮಾಡಿದ್ದಾರೆ. ಸಂಧ್ಯಾಗೆ ಗುದ್ದಿದ ಬಳಿಕ ಕಾರನ್ನೂ ನಿಲ್ಲಿಸದೇ ಪರಾರಿಯಾಗೋದಕ್ಕೆ ಯತ್ನಿಸಿದ್ದಾರೆ. ಆದ್ರೆ ಅಪಘಾತದ ತೀವ್ರತೆಯನ್ನು ಕಂಡಿದ್ದ ಅಲ್ಲಿದ್ದ ಜನ
ಪರಾರಿಯಾಗುತ್ತಿದ್ದ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಎಸ್ಕೇಪ್‌ ಆಗುತ್ತಿದ್ದ ಆರೋಪಿಗಳನ್ನು ಸ್ಥಳೀಯರೇ ಹಿಡಿದುಕೊಟ್ರು!

ಆರೋಪಿ ಧನುಷ್ ಹಣವಂತ. ಏನು ಬೇಕಾದರೂ ಮಾಡಿ ಪಾರಾಗಬಹುದು ಎಂಬ ದುರಹಂಕಾರ. ಒಂದು ಜೀವದ ಬೆಲೆ ತಿಳಿಯದೆ ಕುಡಿದು ಕಾರ್‌ ಡ್ರೈವ್‌ ಮಾಡಿ ಒಬ್ಬಾಕೆಯನ್ನು ಕೊಂದುಬಿಟ್ಟಿದ್ದಾನೆ. ಸದ್ಯ ಪೊಲೀಸರು ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಈ ಆರೋಪಿ ಧನುಷ್ ಹಿನ್ನಲೆ ನೋಡಿದ್ರೆ, ಈತ ಕೋಟ್ಯಾಧಿಪತಿ ಪರಮಶಿವಯ್ಯ ಎಂಬುವವರ ಪುತ್ರ. ಅಪಘಾತವೆಸಗಿ ಪ್ರಾಣ ತೆಗೆದ ಬೆನ್ಜ್ ಕಾರು ಎಲ್ ವಿ ಟ್ರಾವೆಲ್ಸ್ ಗೆ ಸೇರಿದ್ದು ಎಂದು ತಿಳಿದುಬಂದಿದೆ.ಇದೇ ಟ್ರಾವೆಲ್ಸ್ ಮಾಲೀಕ ಪರಮಶಿವಯ್ಯ ನ ಏಕೈಕ ಪುತ್ರ ಈ ಧನುಷ್.

ಇದೇ ಕಾರಣಕ್ಕೆ ಪೊಲೀಸರು ಆರೋಪಿಯನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ, ಕುಟುಂಬಸ್ಥರ ದೂರನ್ನು ಸ್ವೀಕರಿಸಲು ತಡ ಮಾಡಿ, ಆರೋಪಿಯ ಫೋಟೋ ಕೂಡ ಸಿಗದಂತೆ ಮರೆಮಾಚುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.

ಸಂಜೆ ಈ ಅಪಘಾತ ನಡೆದಿದ್ದು, ಮಧ್ಯರಾತ್ರಿ 2:30ರ ವರೆಗೂ ಪೊಲೀಸರು FIR ರಿಜಿಸ್ಟರ್ ಮಾಡಲು ಮೀನಾಮೇಷ ಎಣಿಸಿದ್ದಾರೆ. ಆದ್ರೆ ಈ ಪ್ರಕರಣದ ಬಗ್ಗೆ ಮಾಧ್ಯಮಗಳು ಮತ್ತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನಲೆ, ಕಾಟಾಚಾರಕ್ಕೆ ಪೊಲೀಸರು ಕ್ರಮ ಕೈಗೊಂಡಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಗಳು ಕೇಳಿ ಬರುತ್ತಿದೆ.

ಅದೇನೇ ಇರ್ಲಿ, ಹಣ ಬಲ ಇದ್ದ ಮಾತ್ರಕ್ಕೆ ಕಂಠ ಪೂರ್ತಿ ಕುಡಿದು ರಸ್ತೆಯಲ್ಲಿ ನಡೆದಾಡುವವರ ಮೇಲೆ ಕಾರು ಹರಿಸಿ ಜೀವ ತೆಗೆದ ಮೇಲೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಸಂದೇಶ ಸಮಾಜಕ್ಕೆ ರವಾನೆಯಾಗದಿರಲಿ, ಸಂಧ್ಯಾ ಸಾವಿಗೆ ನ್ಯಾಯ ಸಿಗಲಿ ಎಂಬುದು ಜನ ಸಾಮಾನ್ಯರ ಆಗ್ರಹವಾಗಿದೆ.

ಹೆಚ್ಚಿನ ಸುದ್ದಿ

error: Content is protected !!