ಜಗತ್ತಿನಾದ್ಯಂತ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಇನ್‌ಸ್ಟಂಟ್ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp), ಬಳಕೆದಾರರ ದಿನನಿತ್ಯದ ಸಂವಹನವನ್ನು (Tech Tips) ಸುಲಭಗೊಳಿಸಲು ನಿರಂತರವಾಗಿ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಕೆಲಸದ ಒತ್ತಡ, ಬಿಡುವಿಲ್ಲದ ಜೀವನಶೈಲಿಯಿಂದಾಗಿ ನಮ್ಮ ಆಪ್ತರು, ಸ್ನೇಹಿತರು ಅಥವಾ ಕುಟುಂಬದವರ ಹುಟ್ಟುಹಬ್ಬವನ್ನು (Birthday) ನೆನಪಿನಲ್ಲಿಟ್ಟುಕೊಂಡು ವಿಶ್ ಮಾಡಲು ಮರೆತುಹೋಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.
ಇದೀಗ ಇಂತಹ ಸಮಸ್ಯೆಗೆ ಮುಕ್ತಿ ಹಾಡಲು ಮೆಟಾ ಮಾಲೀಕತ್ವದ ವಾಟ್ಸಾಪ್ ಇದೀಗ ಅತ್ಯಾಧುನಿಕ ತಂತ್ರಜ್ಞಾನದ ಹೊಸ ಫೀಚರ್ ಒಂದನ್ನು ಜಾರಿಗೆ ತರಲು ಸಜ್ಜಾಗಿದೆ. ಇನ್ಮುಂದೆ ನಿಮ್ಮ ಕಾಂಟಾಕ್ಟ್ ಲಿಸ್ಟ್‌ನಲ್ಲಿರುವವರ ಬರ್ತ್‌ಡೇ ದಿನಾಂಕವನ್ನು ವಾಟ್ಸಾಪ್ ನಿಮಗೆ ಸ್ವತಃ ನೆನಪಿಸಲಿದೆ.
ಹೇಗೆ ಕೆಲಸ ಮಾಡುತ್ತದೆ ಈ ಅಡ್ವಾನ್ಸ್ಡ್ ರಿಮೈಂಡರ್ ಫೀಚರ್?
ವಾಟ್ಸಾಪ್ ಇತ್ತೀಚೆಗೆ ಹೊಸದಾಗಿ ಅಕೌಂಟ್ ತೆರೆಯುವಾಗ ವಯಸ್ಸಿನ ದೃಢೀಕರಣಕ್ಕಾಗಿ (Age Verification) ಜನ್ಮದಿನಾಂಕವನ್ನು ದಾಖಲಿಸುವುದನ್ನು ಕಡ್ಡಾಯಗೊಳಿಸುವ ನೀತಿಯನ್ನು ತಂದಿದೆ. ಇದನ್ನೇ ಬಂಡವಾಳವಾಗಿಸಿಕೊಂಡು ಸಂಸ್ಥೆಯು ಈ ಬರ್ತ್‌ಡೇ ನೋಟಿಫಿಕೇಶನ್ ಫೀಚರ್ ರೂಪಿಸುತ್ತಿದೆ. ನಿಮ್ಮ ಮೊಬೈಲ್‌ನ ಕಾಂಟಾಕ್ಟ್ ಲಿಸ್ಟ್‌ನಲ್ಲಿರುವ ಯಾರೇ ವ್ಯಕ್ತಿ ವಾಟ್ಸಾಪ್ ಇನ್‌ಸ್ಟಾಲ್ ಮಾಡುವಾಗ ತಮ್ಮ ಹುಟ್ಟಿದ ದಿನಾಂಕವನ್ನು ನಮೂದಿಸಿದ್ದಲ್ಲಿ, ಆ ದಿನಾಂಕದಂದು ವಾಟ್ಸಾಪ್ ನಿಮಗೆ ವಿಶೇಷ ನೋಟಿಫಿಕೇಶನ್ ಮೂಲಕ ಅಲರ್ಟ್ ಮಾಡುತ್ತದೆ.

ಖಾಸಗಿತನಕ್ಕೆ ಧಕ್ಕೆ ತರುತ್ತಾ ಹೊಸ ಫೀಚರ್?
ವಾಟ್ಸಾಪ್‌ನ ಈ ಹೊಸ ಆಲೋಚನೆ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಒಬ್ಬರ ಜನ್ಮದಿನಾಂಕವನ್ನು ಇತರರಿಗೆ ಬಹಿರಂಗಪಡಿಸುವುದು ಬಳಕೆದಾರರ ವೈಯಕ್ತಿಕ ಖಾಸಗಿತನಕ್ಕೆ (Privacy) ಧಕ್ಕೆ ತರುತ್ತದೆ ಎಂಬ ವಾದಗಳು ಕೇಳಿಬರುತ್ತಿವೆ. ಎಲ್ಲರಿಗೂ ತಮ್ಮ ಬರ್ತ್‌ಡೇಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಇಷ್ಟವಿರುವುದಿಲ್ಲ.
ಹೀಗಾಗಿ, ಪ್ರೈವೆಸಿ ಹಿತದೃಷ್ಟಿಯಿಂದ ವಾಟ್ಸಾಪ್ ಈ ಫೀಚರ್‌ನಲ್ಲಿ ಕಸ್ಟಮೈಸ್ಡ್ ಆಯ್ಕೆಗಳನ್ನು ನೀಡುವ ಸಾಧ್ಯತೆಯಿದೆ. ಅಂದರೆ, ಬಳಕೆದಾರರು ತಮ್ಮ ಜನ್ಮದಿನಾಂಕ ಇತರರಿಗೆ ಕಾಣಿಸಬೇಕೇ ಅಥವಾ ಬೇಡವೇ ಎಂಬುದನ್ನು ತಾವೇ ನಿರ್ಧರಿಸುವ ‘ಹೈಡ್ ಬರ್ತ್ ಡೇ’ (Hide Birthday) ಆಪ್ಷನ್ ಸಿಗಬಹುದು ಎನ್ನಲಾಗಿದೆ.
ಪ್ರಸ್ತುತ ಈ ಅತ್ಯಾಧುನಿಕ ತಂತ್ರಜ್ಞಾನದ ಬರ್ತ್‌ಡೇ ವಿಶ್ ಫೀಚರ್ ಕೇವಲ ಆಯ್ದ ಬೀಟಾ ವರ್ಷನ್ (Beta Version) ಬಳಕೆದಾರರಿಗೆ ಮಾತ್ರ ಟೆಸ್ಟಿಂಗ್ ಹಂತದಲ್ಲಿ ಲಭ್ಯವಿದೆ. ಇದರ ಸಾಧಕ-ಬಾಧಕಗಳು ಹಾಗೂ ಪ್ರೈವೆಸಿ ಸಮಸ್ಯೆಗಳ ಬಗ್ಗೆ ತಜ್ಞರೊಂದಿಗೆ ಚರ್ಚಿಸಿದ ಬಳಿಕ, ಮುಂಬರುವ ದಿನಗಳಲ್ಲಿ ಜಾಗತಿಕವಾಗಿ ಎಲ್ಲಾ ಸಾಮಾನ್ಯ ವಾಟ್ಸಾಪ್ ಬಳಕೆದಾರರ ಮೊಬೈಲ್‌ಗಳಿಗೆ ಈ ಅಪ್‌ಡೇಟ್ ಅಧಿಕೃತವಾಗಿ ರೋಲ್ ಔಟ್ ಆಗಲಿದೆ.

