ಮೊಬೈಲ್‌ಗೆ (Mobile) ಅಂಟಿಕೊಂಡಿರುವ ಇಂದಿನ ಮಕ್ಕಳನ್ನು ನಿಯಂತ್ರಿಸುವುದು ಪೋಷಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಡಿಜಿಟಲ್ (Tech Tips) ಬಳಕೆಯನ್ನು ಸುರಕ್ಷಿತವಾಗಿಟ್ಟುಕೊಳ್ಳಲು ವಾಟ್ಸ್‌ಆ್ಯಪ್ (WhatsApp) ಮಹತ್ವದ ಹೆಜ್ಜೆ ಇಟ್ಟಿದ್ದು, ಪೋಷಕರಿಗೆ ಅನುಕೂಲವಾಗುವ ಹೊಸ ಫೀಚರ್ಸ್ ಪರಿಚಯಿಸಲು ಮುಂದಾಗಿದೆ.
ವಾಟ್ಸ್‌ಆ್ಯಪ್ ಮಕ್ಕಳ ಬಳಕೆಗೆ ಪ್ರತ್ಯೇಕ ಅಥವಾ ಸೆಕೆಂಡರಿ ಅಕೌಂಟ್ ವ್ಯವಸ್ಥೆಯನ್ನು ಪರಿಚಯಿಸಲು ಮುಂದಾಗಿದ್ದು, ಇದರ ನಿರ್ವಹಣೆಯ ಸಂಪೂರ್ಣ ಹಕ್ಕು ಪೋಷಕರ ಕೈಯಲ್ಲಿರಲಿದೆ. WABetaInfo ವರದಿಯಂತೆ, ಈ ಹೊಸ ವೈಶಿಷ್ಟ್ಯವನ್ನು ವಾಟ್ಸ್‌ಆ್ಯಪ್‌ನ ಆಂಡ್ರಾಯ್ಡ್ ಬೀಟಾ ಆವೃತ್ತಿ 2.26.1.30ರಲ್ಲಿ ಗುರುತಿಸಲಾಗಿದೆ.
ಪ್ರಸ್ತುತ ಈ ಫೀಚರ್ಸ್ ಅಭಿವೃದ್ಧಿಯ ಹಂತದಲ್ಲಿದ್ದು, ಸಾರ್ವಜನಿಕ ಬಳಕೆದಾರರಿಗೆ ಇನ್ನೂ ಬಿಡುಗಡೆ ಮಾಡಲಾಗಿಲ್ಲ. ಮಕ್ಕಳ ಡಿಜಿಟಲ್ ಸುರಕ್ಷತೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ವಾಟ್ಸ್‌ಆ್ಯಪ್ ಈ ಕ್ರಮ ಕೈಗೊಂಡಿದೆ ಎಂದು ವರದಿ ಸ್ಪಷ್ಟಪಡಿಸಿದೆ.
ಈ ಹೊಸ ವ್ಯವಸ್ಥೆಯ ಉದ್ದೇಶವೇನು?
ಮಕ್ಕಳಿಗಾಗಿ ಪರಿಚಯಿಸಲಾಗುತ್ತಿರುವ ದ್ವಿತೀಯ ವಾಟ್ಸ್‌ಆ್ಯಪ್ ಖಾತೆಯ ಮುಖ್ಯ ಉದ್ದೇಶ, ಅವರ ಡಿಜಿಟಲ್ ಚಟುವಟಿಕೆಗಳನ್ನು ಪೋಷಕರ ನಿಯಂತ್ರಣದಲ್ಲಿ ಇಡುವುದಾಗಿದೆ. ಉದಾಹರಣೆಗೆ, ಮಕ್ಕಳು ತಮ್ಮ ಖಾತೆಯಲ್ಲಿ ಸಂಗ್ರಹಿಸಿರುವ ಸಂಪರ್ಕ ಸಂಖ್ಯೆಗಳಿಗಷ್ಟೇ ಸಂದೇಶ ಕಳುಹಿಸಲು ಹಾಗೂ ಕರೆ ಮಾಡಲು ಅನುಮತಿ ನೀಡುವ ವ್ಯವಸ್ಥೆ ಇದರಲ್ಲಿ ಇರಲಿದೆ. ಇದರಿಂದ ಅಪರಿಚಿತರೊಂದಿಗೆ ಸಂಪರ್ಕ ಸಾಧಿಸುವ ಅಪಾಯವನ್ನು ಪರಿಣಾಮಕಾರಿಯಾಗಿ ತಡೆಯಬಹುದು.
ಈಗಿರುವ ವಾಟ್ಸ್‌ಆ್ಯಪ್ ಆವೃತ್ತಿಯಲ್ಲಿ ಸಂದೇಶ ಕಳುಹಿಸುವಿಕೆ ಹಾಗೂ ಕರೆಗಳ ಮೇಲೆ ನೇರ ನಿಯಂತ್ರಣ ವಹಿಸುವ ಅವಕಾಶ ಇಲ್ಲ. ಆದರೆ, ಈ ಹೊಸ ಫೀಚರ್ಸ್ ಮೂಲಕ ಪೋಷಕರಿಗೆ ಮಕ್ಕಳ ಬಳಕೆಯ ಮೇಲೆ ಹೆಚ್ಚಿನ ಹಿಡಿತ ಸಿಗಲಿದೆ.
ಸದ್ಯ ಪೋಷಕರ ನಿಯಂತ್ರಣಕ್ಕೆ ಸಂಬಂಧಿಸಿದ ಸಾಧನಗಳು ಪರೀಕ್ಷಾ ಹಂತದಲ್ಲಿದ್ದು, ವಾಟ್ಸ್‌ಆ್ಯಪ್ ಇನ್ನೂ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಈ ಫೀಚರ್ಸ್ ಜಾರಿಗೆ ಬಂದ ನಂತರ, ಪೋಷಕರು ಮಕ್ಕಳ ವಯಸ್ಸಿಗೆ ಅನುಗುಣವಾಗಿ ಬಳಕೆಯ ಮಿತಿಗಳನ್ನು ನಿಗದಿಪಡಿಸಬಹುದು. ಇದರಿಂದ ಮಕ್ಕಳು ವಾಟ್ಸ್‌ಆ್ಯಪ್ ಅನ್ನು ಹೆಚ್ಚು ಸುರಕ್ಷಿತವಾಗಿ ಹಾಗೂ ಜವಾಬ್ದಾರಿಯುತವಾಗಿ ಬಳಸಲು ಸಹಕಾರಿಯಾಗಲಿದೆ.
ಸೆಕೆಂಡ್ ವಾಟ್ಸ್‌ಆ್ಯಪ್ ಅಕೌಂಟ್ ಹೇಗೆ ಕಾರ್ಯನಿರ್ವಹಿಸುತ್ತದೆ.?
- ಮಕ್ಕಳ ಬಳಕೆಗೆ ಅನುಗುಣವಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಅಕೌಂಟ್
- ಮಕ್ಕಳ ಹಿತದೃಷ್ಟಿಯಿಂದ ಅಗತ್ಯವಿರುವ ಸೀಮಿತ ಫೀಚರ್ಸ್ ಮಾತ್ರ ಲಭ್ಯ
- ಮಕ್ಕಳ ಸೆಕೆಂಡ್ ಅಕೌಂಟ್ ಪೋಷಕರ ಪ್ರೈಮರಿ ವಾಟ್ಸ್‌ಆ್ಯಪ್ ಅಕೌಂಟ್‌ಗೆ ಲಿಂಕ್ ಆಗಿರುತ್ತದೆ
- ಪೋಷಕರಿಗೆ ಮಕ್ಕಳ ಚಾಟ್‌ಗಳು ಮತ್ತು ಕರೆಗಳ ಮೇಲೆ ನಿಯಂತ್ರಣ ವಹಿಸುವ ಅವಕಾಶ
- ಗೌಪ್ಯತೆ ಕಾಪಾಡಿಕೊಂಡಂತೆಯೇ ಸುರಕ್ಷಿತ ಬಳಕೆ ಖಚಿತ
- ಪೋಷಕರ ಮತ್ತು ಮಕ್ಕಳ ಎರಡು ಪ್ರೊಫೈಲ್‌ಗಳ ನಡುವೆ ಸ್ಪಷ್ಟ ಹಾಗೂ ಸುರಕ್ಷಿತ ಸಂಪರ್ಕ ವ್ಯವಸ್ಥೆ ಇರುತ್ತದೆ.


