ಸದಾ ಒಂದಲ್ಲ ಒಂದು ವಿಶೇಷ ಫೀಚರ್ ಗಳನ್ನು (Tech Tips) ನೀಡುವ ಮೂಲಕ ಅತಿ ಹೆಚ್ಚು ಸದ್ದು ಮಾಡುತ್ತಿರುವ ವಾಟ್ಸಾಪ್ (WhatsApp) ಇದೀಗ ತನ್ನ ಗ್ರಾಹಕರಿಗೆ ಅದರಲ್ಲೂ ವಿಶೇಷವಾಗಿ ಕಾರ್ ಡ್ರೈವರ್ಸ್‌ಗಾಗಿ (Drivers) ಭರ್ಜರಿ ಅಪ್‌ಡೇಟ್ ಒಂದನ್ನು ಹೊತ್ತು ತಂದಿದೆ. ಆಪಲ್ ಕಾರ್‌ಪ್ಲೇ (Apple CarPlay) ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಳಿಗಾಗಿ ವಾಟ್ಸಾಪ್ ತನ್ನದೇ ಆದ ಪ್ರತ್ಯೇಕ ‘ಸ್ಟ್ಯಾಂಡ್‌ಅಲೋನ್’ (Standalone app) ಆ್ಯಪ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಇದನ್ನು ಸಂಸ್ಥೆಯು “ಮೇಜರ್ ಅಪ್‌ಡೇಟ್” (Major Update) ಎಂದು ಕರೆದಿದ್ದು, ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಈ ಹೊಸ ಅಪ್ಲಿಕೇಶನ್ ಈಗಾಗಲೇ ಲೈವ್ ಆಗಿದೆ. ಈ ಹಿಂದೆ ಕೇವಲ ಐಓಎಸ್ ಬೀಟಾ (iOS Beta) ಗ್ರಾಹಕರಿಗೆ ಮಾತ್ರ ಟೆಸ್ಟ್‌ಫ್ಲೈಟ್ ಆ್ಯಪ್‌ನಲ್ಲಿ ಲಭ್ಯವಿದ್ದ ಈ ಫೀಚರ್, ಈಗ ಎಲ್ಲಾ ಸಾಮಾನ್ಯ ಬಳಕೆದಾರರ ಕೈಸೇರಿದೆ.
ಕಾರ್‌ಪ್ಲೇ ಆ್ಯಪ್ ನಲ್ಲಿ ಏನಿದೆ ವಿಶೇಷ?
ಆಪಲ್ ಆಪ್ ಸ್ಟೋರ್‌ನಲ್ಲಿ ಆಪಲ್ ಐಓಎಸ್ ಆವೃತ್ತಿ 26.13.74 ಅಪ್‌ಡೇಟ್ ಬಿಡುಗಡೆ ಮಾಡಲಾಗಿದ್ದು, ಇದರ ಜೊತೆಯಲ್ಲೇ ಈ ಕಾರ್‌ಪ್ಲೇ ಆ್ಯಪ್ ಅನ್ನೂ ಪರಿಚಯಿಸಲಾಗಿದೆ. ಈ ಹೊಸ ಆ್ಯಪ್ ಮೂಲಕ ನಿಮ್ಮ ಐಫೋನ್ ಅನ್ನು ಕಾರಿಗೆ ಕನೆಕ್ಟ್ ಮಾಡಿದಾಗ, ಕಾರ್ ಡ್ಯಾಶ್‌ಬೋರ್ಡ್ ಪರದೆಯ ಮೇಲೆಯೇ ನಿಮ್ಮ ವಾಟ್ಸಾಪ್ ಚಾಟ್ಸ್ ಮತ್ತು ಕಾಲ್ ಹಿಸ್ಟರಿಯನ್ನು ನೇರವಾಗಿ ನೋಡಬಹುದು.
ಇದುವರೆಗೆ ಕಾರ್‌ಪ್ಲೇನಲ್ಲಿ ವಾಟ್ಸಾಪ್ ಕಾಲ್ ಅಥವಾ ಮೆಸೇಜ್ ಬಂದಾಗ ನಾರ್ಮಲ್ ಫೋನ್ ಕಾಲ್‌ಗಳ ಜೊತೆಯಲ್ಲೇ ಮಿಕ್ಸ್ ಆಗಿ ಕಾಣಿಸುತ್ತಿತ್ತು. ಆದರೆ ಈಗ ವಾಟ್ಸಾಪ್ ಕಾರ್‌ಪ್ಲೇ ಆ್ಯಪ್‌ನಲ್ಲಿ ಚಾಟ್ಸ್ ಮತ್ತು ಕಾಲ್ ಹಿಸ್ಟರಿಗಾಗಿ ಎರಡು ಪ್ರತ್ಯೇಕ ಸೆಕ್ಷನ್‌ಗಳನ್ನು (Two Separate Sections) ನೀಡಲಾಗಿದೆ. ಇದರಿಂದ ನೀವು ಇತ್ತೀಚೆಗೆ ಯಾರಿಗೆಲ್ಲಾ ವಾಟ್ಸಾಪ್ ಕಾಲ್ ಮಾಡಿದ್ದೀರಿ ಅಥವಾ ಮೆಸೇಜ್ ಮಾಡಿದ್ದೀರಿ ಎಂಬುದನ್ನು ಪ್ರತ್ಯೇಕವಾಗಿಯೇ ನೋಡಬಹುದಾಗಿದೆ.
ಡ್ರೈವಿಂಗ್ ಮಾಡುವಾಗ ಡಿಸ್ಟರ್ಬ್ ಆಗಲ್ಲ
ಕಾರು ಚಾಲನೆ ಮಾಡುವಾಗ ಚಾಲಕರ ಗಮನ ಬೇರೆಡೆ ಸೆಳೆಯಬಾರದು ಎಂಬ ಹಿತದೃಷ್ಟಿಯಿಂದ ವಾಟ್ಸಾಪ್ ಒಂದು ಸೂಪರ್ ಸೆಕ್ಯೂರಿಟಿ ನಿಯಮವನ್ನು ತಂದಿದೆ. ಬಳಕೆದಾರರು ಕಾರ್ ಸ್ಕ್ರೀನ್ ಮೇಲಿಂದಲೇ ನೇರವಾಗಿ ಯಾರಿಗಾದರೂ ವಾಟ್ಸಾಪ್ ಕಾಲ್ ಮಾಡಬಹುದು. ಆದರೆ, ಯಾರದ್ದಾದರೂ ಚಾಟ್ ವಿಂಡೋ ಓಪನ್ ಮಾಡಿ ಮೆಸೇಜ್ ಓದಬೇಕೆಂದರೆ ಮೊದಲು ಕಾರನ್ನು ನಿಲ್ಲಿಸಬೇಕಾಗುತ್ತದೆ (Stop the car). ಚಾಲನೆ ನಿಲ್ಲಿಸಿದ ಬಳಿಕವಷ್ಟೇ ಫೋನ್ ಮೂಲಕ ಚಾಟ್ ಆಕ್ಸೆಸ್ ಮಾಡಲು ಸಾಧ್ಯವಾಗುತ್ತದೆ.
ಸಿರಿ (Siri) ಕಿರಿಕಿರಿ ಇರಲ್ಲ, ವಾಯ್ಸ್ ಮೂಲಕವೇ ರಿಪ್ಲೈ ಮಾಡಿ..
ಇಷ್ಟು ದಿನ ಕಾರ್‌ಪ್ಲೇ ಬಳಸುವಾಗ ವಾಟ್ಸಾಪ್ ಮೆಸೇಜ್‌ಗಳನ್ನು ಓದಲು ಅಥವಾ ಅದಕ್ಕೆ ರಿಪ್ಲೈ ಮಾಡಲು ಆಪಲ್‌ನ ವಾಯ್ಸ್ ಅಸಿಸ್ಟೆಂಟ್ ‘ಸಿರಿ’ (Siri) ಸಹಾಯ ಬೇಕಾಗುತ್ತಿತ್ತು. ಸಿರಿ ಮೂಲಕವೇ ಮೆಸೇಜ್ ಡಿಕ್ಟೇಟ್ ಮಾಡಿಸಿ, ಅದಕ್ಕೆ ಧ್ವನಿಯ ಮೂಲಕವೇ ರಿಪ್ಲೈ ಮಾಡಬೇಕಿತ್ತು. ಆದರೆ ಈ ಹೊಸ ಸ್ಟ್ಯಾಂಡ್‌ಅಲೋನ್ ಆ್ಯಪ್ ಬಂದಿರುವುದರಿಂದ, ಸಿರಿ ಮಧ್ಯಪ್ರವೇಶ ಇಲ್ಲದೆಯೇ ನೀವು ವಾಯ್ಸ್ ಡಿಕ್ಟೇಷನ್ (Voice Dictation) ಮೂಲಕ ಸುಲಭವಾಗಿ ಮೆಸೇಜ್‌ಗಳಿಗೆ ರಿಪ್ಲೈ ಮಾಡಬಹುದಾಗಿದೆ.
ಅಂದಹಾಗೆ, ಈ ಹೊಸ ಕಾರ್‌ಪ್ಲೇ ಆ್ಯಪ್ ಕೂಡ ವಾಟ್ಸಾಪ್‌ನ ಎಂದಿನ ಭದ್ರತೆಯಾದ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ (End-to-End Encryption) ಅನ್ನು ಬೆಂಬಲಿಸುತ್ತದೆ. ಅಂದರೆ ನಿಮ್ಮ ಕಾರ್ ಸ್ಕ್ರೀನ್ ಮೂಲಕ ನಡೆಯುವ ಚಾಟ್ ಮತ್ತು ಕಾಲ್‌ಗಳು ಸಂಪೂರ್ಣ ಸುರಕ್ಷಿತವಾಗಿರಲಿವೆ. ನೀವೂ ಐಫೋನ್ ಬಳಕೆದಾರರಾಗಿದ್ದು, ಕಾರಿನಲ್ಲಿ ಆಪಲ್ ಕಾರ್‌ಪ್ಲೇ ಬಳಸುತ್ತಿದ್ದರೆ ತಕ್ಷಣವೇ ನಿಮ್ಮ ವಾಟ್ಸಾಪ್ ಆ್ಯಪ್ ಅನ್ನು ಅಪ್‌ಡೇಟ್ ಮಾಡಿಕೊಳ್ಳಿ..


