ಚಿತ್ತೂರು: ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಮದುವೆಯಾದ ಆರೋಪದಲ್ಲಿ 33 ವರ್ಷದ ಶಿಕ್ಷಕನೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ.
ಕಾಲೇಜೊಂದರಲ್ಲಿ ಶಿಕ್ಷಕನಾಗಿದ್ದ ಆರೋಪಿ ಚಲಪತಿಯನ್ನು ಬಂಧಿಸಲಾಗಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಈತನಿಗೆ ಈಗಾಗಲೇ ಮದುವೆಯಾಗಿದ್ದು, ಮಗಳಿದ್ದಾಳೆ. ಹೀಗಿದ್ದೂ 12ನೆ ತರಗತಿಯಲ್ಲಿ ಕಲಿಯುತ್ತಿರುವ 17 ವರ್ಷದ ಅಪ್ರಾಪ್ತೆಯನ್ನು ವಿವಾಹವಾಗಿದ್ದಾನೆ.
ವಿದ್ಯಾರ್ಥಿನಿ ಪರೀಕ್ಷೆ ಬರೆದ ನಂತರ ಆಕೆಯನ್ನು ಪುಸಲಾಯಿಸಿದ ಆರೋಪಿ ತಿರುಪತಿಗೆ ಕರೆದುಕೊಂಡು ಹೋಗಿದ್ದಾನೆ.
’ಅಲ್ಲಿರುವ ದೇವಸ್ಥಾನವೊಂದರಲ್ಲಿ ಇಬ್ಬರೂ ವಿವಾಹವಾಗಿದ್ದಾರೆ. ಆನಂತರ ಆತನ ವರ್ತನೆಯಲ್ಲಿ ಬದಲಾವಣೆ ಗಮನಿಸಿದ ವಿದ್ಯಾರ್ಥಿನಿ ಪ್ರಕರಣದ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾಳೆ. ಆನಂತರ ಹೆತ್ತವರ ಜೊತೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ ಎನ್ನಲಾಗಿದೆ.