ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಅಭೂತಪೂರ್ವ ಗೆಲುವಿನತ್ತ ಸಾಗುತ್ತಿದ್ದಂತೆ, ಚಿತ್ರರಂಗದ ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ರಜನಿಕಾಂತ್, ಚಿರಂಜೀವಿ, ರಾಮ್ ಚರಣ್ ಮತ್ತು ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರು ವಿಜಯ್ ಸಾಧನೆಯನ್ನು ಕೊಂಡಾಡುತ್ತಿದ್ದರೆ, ನಟ ಪ್ರಕಾಶ್ ರಾಜ್ (Prakash Raj) ಅವರು ನೀಡಿರುವ ಪ್ರತಿಕ್ರಿಯೆ ಮಾತ್ರ ಈಗ ವಿವಾದಕ್ಕೆ ಈಡುಮಾಡಿದೆ. ತಮಿಳುನಾಡಿನ ರಾಜಕೀಯ ಬೆಳವಣಿಗೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅವರು, ಸಮಾಜವು ಈಗ ಕೇವಲ ‘ಅಭಿಮಾನಿಗಳಿಂದ ಆವೃತವಾಗಿದೆ’ ಎಂದು ಮಾರ್ಮಿಕವಾಗಿ ಟೀಕಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್?
ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಕಾಶ್ ರಾಜ್, “ಹಲೋ ತಮಿಳುನಾಡು.. ಈ ಹಿಂದೆ ಕಾಮರಾಜ್ ಸೋತಿದ್ದರು, ಈಗ ಎಂ.ಕೆ. ಸ್ಟಾಲಿನ್ ಸೋತಿದ್ದಾರೆ. ಸಮಾಜವು ಈಗ ಅಭಿಮಾನಿಗಳಿಂದ ತುಂಬಿಹೋಗಿದೆಯೇ ಹೊರತು ರಾಜಕೀಯ ಪ್ರಜ್ಞೆಯಿಂದಲ್ಲ ಎಂಬುದು ಸಾಬೀತಾಗಿದೆ. ರಾಜಕೀಯ ಜಾಗೃತಿ ಮೂಡಿಸುವುದು ಯಾವಾಗಲೂ ವಿರೋಧ ಪಕ್ಷದ ಕೆಲಸ. ಗೆದ್ದವರಿಗೆ ಅಭಿನಂದನೆಗಳು” ಎಂದು ಬರೆದುಕೊಂಡಿದ್ದಾರೆ. ಜನರ ತೀರ್ಪನ್ನು ನೇರವಾಗಿ ಒಪ್ಪಿಕೊಳ್ಳುವ ಬದಲು, ವಿಜಯ್ ಗೆಲುವನ್ನು ಕೇವಲ ಅಭಿಮಾನಿಗಳ ಅಬ್ಬರ ಎಂದು ಅವರು ಬಿಂಬಿಸಿರುವುದು ತಮಿಳು ಜನತೆಯ ಕೆಂಗಣ್ಣಿಗೆ ಗುರಿಯಾಗಿದೆ.
Tamilnadu Elections வணக்கம் தமிழ்நாடு.. காமராஜர் தோற்றார். மு. க. ஸ்டாலின் தோற்றிருக்கிறார். சமூகம் ரசிகர் மயமாகி இருக்கிறது. அரசியல் மயமாகவில்லை என்பது நிரூபணமாகிறது. அரசியல் விழிப்புணர்வு செய்பவர்களின் பணி என்பது எப்போதும் எதிர்க்கட்சி…
— Prakash Raj (@prakashraaj) May 4, 2026
ಅಭಿಮಾನಿಗಳಿಂದ ಕ್ಲಾಸ್
ಪ್ರಕಾಶ್ ರಾಜ್ ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. “ನೀವು ಕರ್ನಾಟಕದಲ್ಲಿ ಕುಳಿತು ತಮಿಳುನಾಡಿನ ರಾಜಕೀಯದ ಬಗ್ಗೆ ನಮಗೆ ಪಾಠ ಮಾಡಬೇಡಿ, ನಮಗೆ ಯಾರನ್ನು ಆರಿಸಬೇಕು ಎಂಬ ಜ್ಞಾನವಿದೆ” ಎಂದು ಬಳಕೆದಾರರೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಕೆಲವರು, “ನೀವು ಕೂಡ ನಟರೇ ಆಗಿದ್ದರೂ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದೀರಿ ಎಂಬುದನ್ನು ಮರೆಯಬೇಡಿ” ಎಂದು ವ್ಯಂಗ್ಯವಾಡಿದ್ದಾರೆ. ತಮಿಳುನಾಡಿಗೂ ನಿಮಗೂ ಸಂಬಂಧವಿಲ್ಲ, ನಮ್ಮ ಪರವಾಗಿ ಮಾತನಾಡಬೇಡಿ ಎಂಬ ಆಕ್ರೋಶದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿವೆ.
ಚುನಾವಣಾ ಫಲಿತಾಂಶದ ಪ್ರಕಾರ ವಿಜಯ್ ಅವರ ಪಕ್ಷವು ಸುಮಾರು 108 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಮೊದಲ ಚುನಾವಣೆಯಲ್ಲೇ ಅತಿ ಹೆಚ್ಚು ಮತಗಳನ್ನು ಗಳಿಸಿ ದಾಖಲೆ ಬರೆದಿದೆ. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರವು ಶೀಘ್ರದಲ್ಲೇ ತೆರೆಗೆ ಬರಲು ಸಿದ್ಧವಾಗುತ್ತಿದೆ. ಎಚ್. ವಿನೋದ್ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಜಕೀಯ ಯಶಸ್ಸಿನ ನಡುವೆ ವಿಜಯ್ ಅವರ ಈ ಸಿನಿಮಾ ಕೂಡ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ.
ಇದನ್ನೂ ಓದಿ: ವಿಜಯ್ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲ, ಮೈತ್ರಿ ಸರ್ಕಾರ ರಚನೆ ಬಹುತೇಕ ಖಚಿತ