ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಮಹಿಳೆಯರ ಸ್ವಾತಂತ್ರ್ಯವನ್ನು ಮತ್ತಷ್ಟು ನಿರ್ಬಂಧಿಸುವ ಹೊಸ ಕಾನೂನನ್ನು ತಂದಿದೆ. ಮಹಿಳೆಯರು ಮತ್ತೊಬ್ಬರಿಗೆ ಕೇಳಿಸುವಂತೆ ಜೋರಾಗಿ ಕುರಾನ್ ಪಠಿಸುವುದನ್ನು ಕೂಡಾ ತಾಲಿಬಾನ್ ಇದೀಗ ಬ್ಯಾನ್ ಮಾಡಿದೆ.
ಹೌದು, ಸದ್ಗುಣ ಪ್ರಚಾರ ಮತ್ತು ದುಷ್ಕೃತ್ಯಗಳ ತಡೆಗಟ್ಟುವಿಕೆಗಾಗಿ ತಾಲಿಬಾನ್ ಸಚಿವ ಮೊಹಮ್ಮದ್ ಖಾಲಿದ್ ಹನಾಫಿ ಅವರು ಈ ಹೊಸ ಆದೇಶವನ್ನು ಹೊರಡಿಸಿದ್ದಾರೆ. ಇದರ ಪ್ರಕಾರ ಮಹಿಳೆಯರು ಇತರ ಮಹಿಳೆಯರ ಜೊತೆ ಇರುವಾಗ ಕುರಾನ್ ಅನ್ನು ಪಠಿಸುವುದು ತಪ್ಪಿಸಬೇಕು ಎಂದು ಸ್ಥಳೀಯ ವಾಹಿನಿ ವರದಿ ಮಾಡಿದೆ.
ಮಹಿಳೆಯರ ಧ್ವನಿಯನ್ನು “ಅವ್ರಾ” ಎಂದು ಪರಿಗಣಿಸಲಾಗುತ್ತದೆ. ಅದನ್ನು ಅವರು ಮರೆಮಾಚಬೇಕು. ಮಹಿಳೆಯರ ಧ್ವನಿ ಸಾರ್ವಜನಿಕವಾಗಿ ಕೇಳಬಾರದು ಎಂದು ಹನಾಫಿ ಅವರು ಈ ನಿರ್ಬಂಧವನ್ನು ಸಮರ್ಥಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಮಹಿಳೆಯರು ಅಜಾನ್ ಅಥವಾ ಸಂಗೀತವನ್ನು ಹಾಡುವುದು ಅಥವಾ ಅದನ್ನು ಆನಂದಿಸುವುದು ಕೂಡಾ ತಪ್ಪು ಎಂದಿದ್ದಾರೆ.
ಈ ಹೊಸ ನಿರ್ಬಂಧವು ಮಹಿಳೆಯರಲ್ಲಿ ಮುಕ್ತವಾಗಿ ಮಾತನಾಡುವ ಸಾಮರ್ಥ್ಯವನ್ನು ಪ್ರತಿಬಂಧಿಸಬಹುದೆಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಮಹಿಳೆಯರನ್ನು ಸಾರ್ವಜನಿಕ ಜೀವನದಿಂದ ಮತ್ತಷ್ಟು ದೂರ ತಳ್ಳಲಾಗುತ್ತಿದೆ.
2021 ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಅಲ್ಲಿನ ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸುವುದನ್ನು ಮುಂದುವರಿಸಿಕೊಂಡು ಬಂದಿದೆ. ಮಹಿಳೆಯರು ಇಡೀ ದೇಹವನ್ನು ಮುಚ್ಚಿಕೊಳ್ಳುವಂತೆ ಬುರ್ಖಾ ಧರಿಸುವುದು, ಪಾರ್ಕ್, ಶಾಲೆಗಳಿಗೆ ಹೋಗುವುದು ನಿರ್ಬಂಧ, ಪರುಷ ಸಂಬಂಧಿಯೊಂದಿಗೆ ಮಾತನಾಡುವುದು, ಪ್ರಯಾಣಿಸುವುದು ಸೇರಿದಂತೆ ಹಲವು ರೀತಿಯ ನಿರ್ಬಂಧಗಳನ್ನು ಹೇರಲಾಗಿದೆ.