ಮುಂಬೈ: ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ (Bollywood) ಹಾಗೂ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರ ಹಳೆಯ ಪ್ರೀತಿಯ ಕಥೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಭಾರಿ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಲಲಿತ್ ಮೋದಿ ಅವರು ಸುಶ್ಮಿತಾ ಸೇನ್ ಅವರನ್ನು ಕೊಂಡಾಡಿ, ಅವರ ವಿರುದ್ಧ ಕೇಳಿಬಂದಿದ್ದ Gold Digger ಎಂಬ ಟೀಕೆಗಳಿಗೆ ತಿರುಗೇಟು ನೀಡಿದ್ದರು. ಈ ಬೆನ್ನಲ್ಲೇ ಸುಶ್ಮಿತಾ ಸೇನ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅತ್ಯಂತ ಆಕರ್ಷಕ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ಸ್ಟೈಲಿಶ್ ಫೋಟೋ ಶೇರ್ ಮಾಡಿದ ನಟಿ
ಲಲಿತ್ ಮೋದಿ ಅವರ ಹೇಳಿಕೆಗಳ ಬಗ್ಗೆ ನೇರವಾಗಿ ಯಾವುದೇ ಪ್ರಸ್ತಾಪ ಮಾಡದ ಸುಶ್ಮಿತಾ ಸೇನ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಪ್ಪು ಬಣ್ಣದ ವೆಸ್ಟರ್ನ್ ಬಟ್ಟೆ ಹಾಗೂ ಕೆಂಪು ಬಣ್ಣದ ಶೂ ಧರಿಸಿರುವ ಸ್ಟೈಲಿಶ್ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೊಗಳಿಗೆ “ನಾನು ಯಾರಿಗೂ ಅಷ್ಟಾಗಿ ಪರಿಚಯವಿಲ್ಲದ ಹಾದಿಯಲ್ಲಿ ಅತ್ಯಂತ ಆರಾಮದಾಯಕ ಹಾಗೂ ಆಕರ್ಷಕ ಸ್ಲಿಪ್ಪರ್‌ಗಳನ್ನು ಧರಿಸಿ ಸಾಗುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ತಮ್ಮ ಆಪ್ತ ಸ್ನೇಹಿತರೊಬ್ಬರು ನೀಡಿದ ಉಡುಗೊರೆಯನ್ನು ಹೆಮ್ಮೆಯಿಂದ ಪ್ರದರ್ಶಿಸಿರುವ ಸುಶ್ಮಿತಾ ಅವರ ಈ ‘ಬಾಸ್ ಲೇಡಿ’ ಲುಕ್ ಕಂಡ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ವಿಶೇಷವೆಂದರೆ, ಸುಶ್ಮಿತಾ ಅವರ ಈ ಸುಂದರ ಫೋಟೊಗಳಿಗೆ ಲಲಿತ್ ಮೋದಿ ಅವರೇ ಲೈಕ್ ಮಾಡಿರುವುದು ನೆಟ್ಟಿಗರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ದೇಶಾದ್ಯಂತ ಭಾರಿ ಚರ್ಚೆ ಹುಟ್ಟುಹಾಕಿದ್ದ ಸುಶ್ಮಿತಾ-ಲಲಿತ್ ಪ್ರೇಮ
ಕಳೆದ 2022 ರಲ್ಲಿ ಲಲಿತ್ ಮೋದಿ ಅವರು ಸುಶ್ಮಿತಾ ಸೇನ್ ಜೊತೆಗಿನ ಪ್ರೇಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದಾಗ ಇಡೀ ದೇಶಾದ್ಯಂತ ಭಾರಿ ಚರ್ಚೆ ಸೃಷ್ಟಿಯಾಗಿತ್ತು. ಆ ದಿನ ನಡೆದ ಸ್ವಾರಸ್ಯಕರ ಘಟನೆಯನ್ನು ಲಲಿತ್ ಮೋದಿ ಅವರು ‘ಹ್ಯೂಮನ್ಸ್ ಆಫ್ ಬಾಂಬೆ’ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ. ಲಂಡನ್‌ಗೆ ವಿಮಾನದಲ್ಲಿ ಪ್ರಯಾಣಿಸುವಾಗ ಸುಶ್ಮಿತಾ ನನ್ನ ಪಕ್ಕದಲ್ಲೇ ಕುಳಿತಿದ್ದರು. ಪ್ರೀತಿಯ ವಿಚಾರವನ್ನು ಜಗತ್ತಿಗೆ ತಿಳಿಸುವ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕುವಾಗ, ನಾನು ನಿಜವಾಗಿಯೂ ಅದನ್ನು ಪೋಸ್ಟ್ ಮಾಡುವುದಿಲ್ಲ ಎಂದು ಸುಶ್ಮಿತಾ ಅಂದುಕೊಂಡಿದ್ದರು. ಇಬ್ಬರ ನಡುವೆ ಏನೋ ಸಣ್ಣ ಚರ್ಚೆ ನಡೆಯುವಾಗ ‘ನೀವು ಇದನ್ನು ಪೋಸ್ಟ್ ಮಾಡಲು ಸಾಧ್ಯವೇ ಇಲ್ಲ’ ಎಂದು ಸುಶ್ಮಿತಾ ಸವಾಲು ಹಾಕಿದ್ದರು. ನಾನು ನಗುತ್ತಲೇ ಬಟನ್ ಒತ್ತಿಬಿಟ್ಟೆ ಎಂದು ಮೋದಿ ಹೇಳಿದ್ದಾರೆ. ನಾವು ಲಂಡನ್‌ನಲ್ಲಿ ವಿಮಾನದಿಂದ ಕೆಳಗಿಳಿಯುವಷ್ಟರಲ್ಲಿ ಇಡೀ ಇಂಟರ್ನೆಟ್ ಜಗತ್ತಿನಲ್ಲಿ ಈ ಸುದ್ದಿಯೇ ಸದ್ದು ಮಾಡುತ್ತಿತ್ತು. ಆದರೆ ಸುಶ್ಮಿತಾ ಎಂದಿಗೂ ಆ ಪೋಸ್ಟ್ ಡಿಲೀಟ್ ಮಾಡಲು ಹೇಳಲಿಲ್ಲ ಮತ್ತು ಆ ಸುಂದರ ದಿನಗಳ ಬಗ್ಗೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಲಲಿತ್ ಮೋದಿ ಸ್ಪಷ್ಟಪಡಿಸಿದ್ದಾರೆ.
ಸುಶ್ಮಿತಾ ಸೇನ್ ಅವರ ವ್ಯಕ್ತಿತ್ವದ ಬಗ್ಗೆ ಅಪಾರ ಗೌರವ ವ್ಯಕ್ತಪಡಿಸಿರುವ ಲಲಿತ್ ಮೋದಿ, ಸುಶ್ಮಿತಾ ನನ್ನ ಬದುಕಿನಲ್ಲಿ ಅತ್ಯಂತ ವಿಶೇಷವಾದ ವ್ಯಕ್ತಿಯಾಗಿದ್ದರು. ನನ್ನ ವೈಯಕ್ತಿಕ ಬೆಳವಣಿಗೆಗೆ ಅವರು ಕಾರಣರಾಗಿದ್ದಾರೆ. ಆದರೆ ಇಬ್ಬರ ನಡುವಿನ ದೂರ ನಮಗೆ ಅಡ್ಡಿಯಾಯಿತು; ಅವರ ವೃತ್ತಿಜೀವನ ಭಾರತದಲ್ಲಿದ್ದರೆ, ನನ್ನ ಬದುಕು ಲಂಡನ್‌ನಲ್ಲಿತ್ತು. ಪ್ರಸ್ತುತ ಸಿಂಗಲ್ ಮದರ್ ಆಗಿ ತಮ್ಮ ಇಬ್ಬರು ಹೆಣ್ಣು ಮಕ್ಕಳಾದ ರೆನೆ ಮತ್ತು ಅಲಿಸಾ ಅವರನ್ನು ಅವರು ಬೆಳೆಸುತ್ತಿರುವ ರೀತಿ ನಿಜಕ್ಕೂ ಶ್ಲಾಘನೀಯ ಎಂದು ಮೋದಿ ಹೊಗಳಿದ್ದಾರೆ. ಸದ್ಯ ಸುಶ್ಮಿತಾ ಸೇನ್ ಅವರು ತಮ್ಮ ವೆಬ್ ಸರಣಿ ‘ತಾಲಿ’ ಯಶಸ್ಸಿನ ನಂತರ ಮುಂದಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ: ರೂಪ ಮುಖ್ಯವಲ್ಲ, ಸಾಧನೆ ಮುಖ್ಯ, ಐಶ್ವರ್ಯಾ ಪರ ಬ್ಯಾಟ್ ಬೀಸಿದ ಮಾಧುರಿ ದೀಕ್ಷಿತ್