ನವದೆಹಲಿ: ರಾಷ್ಟ್ರೀಯ ತನಿಖಾ ಏಜೆನ್ಸಿಗಳನ್ನು ಬಳಸಿಕೊಂಡು ಕೇಂದ್ರ ಸರಕಾರ ಅಧಿಕಾರದ ದುರುಪಯೋಗ ನಡೆಸುತ್ತಿದೆ ಎಂದು 14 ವಿರೋಧ ಪಕ್ಷಗಳು ಆರೋಪಿಸಿದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ವಿರೋಧಪಕ್ಷಗಳ ನಾಯಕರ ವಿರುದ್ಧ ಈಡಿ ಮತ್ತು ಸಿಬಿಐ ದಾಖಲಿಸಿರುವ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿದೆ ಎಂದು ವಿರೋಧ ಪಕ್ಷಗಳ ಪರ ವಕೀಲ ಅಭಿಷೇಕ್ ಮನು ಸಿಂಗ್ವಿ ಸಲ್ಲಿಸಿರುವಂತಹ ಅರ್ಜಿಯಲ್ಲಿ ತಿಳಿಸಲಾಗಿತ್ತು.
10 ವರ್ಷಗಳನ್ನು ಗಮನಿಸುವುದಾದರೆ ಜಾರಿ ನಿರ್ದೇಶನಾಲಯ 7 ವರ್ಷಗಳಲ್ಲಿ 6 ಪಟ್ಟು ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. ಈ ಪೈಕಿ ಶೇ.23ರಷ್ಟು ಅಪರಾಧಗಳಿಗೆ ಮಾತ್ರ ಶಿಕ್ಷೆಯಾಗಿದೆ ಎಂದು ವಿಪಕ್ಷಗಳ ಅರ್ಜಿಯಲ್ಲಿ ತಿಳಿಸಲಾಗಿತ್ತು.
ಆದರೆ ಅರ್ಜಿಯ ಸಿಂಧುತ್ವ ಮತ್ತು ಕಾರ್ಯಸಾಧ್ಯತೆಯ ಬಗ್ಗೆ ಸಿಜೆಐ ಡಿವೈ ಚಂದ್ರಚೂಡ್ ಅನುಮಾನ ವ್ಯಕ್ತಪಡಿಸಿದರು. ತನಿಖೆ ಮತ್ತು ಕಾನೂನು ಕ್ರಮದಿಂದ ವಿರೋಧ ಪಕ್ಷಗಳಿಗೆ ವಿನಾಯಿತಿ ಬಯಸುತ್ತೀರಾ ಎಂದು ಪ್ರಶ್ನಿಸಿದರು.