ನವದೆಹಲಿ : ಸಂವಿಧಾನದ 300ಎ ವಿಧಿಯು ಕಾನೂನಿನ ಅಧಿಕಾರದಿಂದ ಹೊರತುಪಡಿಸಿ ಯಾವುದೇ ವ್ಯಕ್ತಿ ತನ್ನ ಆಸ್ತಿಯಿಂದ ವಂಚಿತನಾಗಬಾರದು ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ದೇಶದಲ್ಲಿ ಬುಲ್ಡೋಜರ್ ಕಾರ್ಯಾಚರಣೆಗೆ ತಡೆ ನೀಡಿ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ.
ಕಾರ್ಯಾಂಗ, ಏಕಪಕ್ಷೀಯ ನಿರ್ಧಾರವು ತಪ್ಪು ಎಂದಿರುವ ಸರ್ವೋಚ್ಛ ನ್ಯಾಯಾಲಯವು, ಆರೋಪಿಗಳ ಮನೆಗಳನ್ನು ನೆಲಸಮ ಮಾಡುವಂತಿಲ್ಲ ಎಂದಿದೆ. ಬುಲ್ಡೋಜರ್ ಕ್ರಮ ಅಧಿಕಾರದ ಹಂಚಿಕೆಗೆ ವಿರುದ್ಧವಾಗಿದೆ. ದೇಶದ ಕಾನೂನು ಗೌರವಿಸಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್ನ ದ್ವಿಸದಸ್ಯ ಪೀಠವು ಈ ತೀರ್ಪಿತ್ತಿದೆ.
ಬುಲ್ಡೋಜರ್ ಸಂಸ್ಕೃತಿ ನಾಗರಿಕ ಸಮಾಜಕ್ಕೆ ಮಾರಕವಾಗಿದೆ ಎಂದು ಈ ಹಿಂದೆಯೂ ಕೋರ್ಟ್ ಹೇಳಿದ್ದು, ಅಕ್ರಮ ಅತಿಕ್ರಮಣ ಅಥವಾ ಕಾನೂನುಬಾಹಿರವಾಗಿ ನಿರ್ಮಿಸಲಾದ ಕಟ್ಟಡಗಳನ್ನು ಕೆಡವಿಹಾಕಲು ಕ್ರಮ ಕೈಗೊಳ್ಳುವ ಮೊದಲು ಕಾನೂನು ಪ್ರಕ್ರಿಯೆಯನ್ನು ಅನುಸರಿಸಬೇಕು. ರಾಜ್ಯ ಮತ್ತು ಅದರ ಅಧಿಕಾರಿಗಳು ಅನಿಯಂತ್ರಿತ ಮತ್ತು ಅತಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದೆ.