ಹೊಸದಿಲ್ಲಿ: ಮೀಡಿಯಾ ಒನ್ ಮೇಲೆ ಕೇಂದ್ರ ಸರಕಾರ ಹೇರಿದ್ದ ನಿರ್ಬಂಧವನ್ನು ತೆಗೆದುಹಾಕಿರುವ ಸುಪ್ರೀಂ ಕೋರ್ಟ್ ಚಾನೆಲ್ ಗೆ ಸೆಕ್ಯುರಿಟಿ ಕ್ಲಿಯರೆನ್ಸ್ ನೀಡದ ಸರಕಾರವನ್ನು ತರಾಟೆಗೆತ್ತಿಕೊಂಡಿದೆ.
ಚಾನೆಲ್ ನಲ್ಲಿದ್ದ ವಿಷಯಗಳು ಕೇಂದ್ರ ಸರಕಾರ ಹೇಳುವಂತೆ ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ವಿರುದ್ಧವಾಗಿ ಇರಲಿಲ್ಲ. ಜನರ ಹಕ್ಕುಗಳನ್ನು ನಿರಾಕರಿಸಲು ರಾಷ್ಟ್ರೀಯ ಭದ್ರತೆಯ ಕಾರಣ ನೀಡಲು ಸಾಧ್ಯವಿಲ್ಲ. ಮಾಧ್ಯಮವು ಸರಕಾರವನ್ನು ಬೆಂಬಲಿಸಲೇಬೇಕು ಎನ್ನುವ ನಿಲುವನ್ನು ಸರಕಾರ ಹೊಂದುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪ್ರಜಾಸತ್ತಾತ್ಮಕ ಗಣರಾಜ್ಯದ ಕಾರ್ಯನಿರ್ವಹಣೆಗೆ ಪತ್ರಿಕಾ ಸ್ವಾತಂತ್ರ್ಯ ಅಗತ್ಯವಿದೆ. ಪ್ರಜಾಸತ್ತಾತ್ಮಕ ಸಮಾಜದಲ್ಲಿ ಮಾಧ್ಯಮಗಳ ಪಾತ್ರ ನಿರ್ಣಾಯಕವಾಗಿದೆ. ಮೀಡಿಯಾ ಒನ್ ಗೆ ಪ್ರಸಾರ ನಿಷೇಧ ಹೇರಿದ ತನ್ನ ನಿರ್ಧಾರವನ್ನು ಸಮರ್ಥಿಸಲು ಯಾವುದೇ ಪುರಾವೆಗಳನ್ನು ತೋರಿಸಲು ಕೇಂದ್ರವು ವಿಫಲವಾಗಿದೆ ಎಂದು ಕೋರ್ಟ್ ಹೇಳಿದೆ.