ರಾಜ್ಯದಲ್ಲಿ ಚುನಾವಣೆ ಕಾವೇರುತ್ತಿದ್ದಂತೆ ವಿವಿಧ ಉಡುಗೊರೆ ನೀಡಿ ಮತದಾರರ ಸೆಳೆಯುವ ಪ್ರಕ್ರಿಯೆ ಜೋರಾಗಿದೆ. ಅದರಂತೆ, ಬಿಜೆಪಿ ಶಾಸಕರೊಬ್ಬರ ಬೆಂಬಲಿಗರು ಮತದಾರರಿಗೆ ಸೀರೆ ಹಂಚಲು ಹೋಗಿ ಫಜೀತಿಗೆ ಸಿಕ್ಕ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದಿದೆ.
ಸೀರೆ ಹಂಚಲು ಬಂದಿದ್ದ ಬಿಜೆಪಿ ಶಾಸಕನ ಎ.ಎಸ್.ಪಾಟೀಲ್ ನಡಹಳ್ಳಿ ಬೆಂಬಲಿಗರನ್ನು ಮಹಿಳೆ ಹಾಗೂ ಸ್ಥಳಿಯರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಒಂದೇ ಒಂದು ಆಶ್ರಯ ಮನೆ ಸಹ ಹಾಕಿ ಕೊಡಲಿಲ್ಲ. ನಿಮ್ಮ ಸೀರೆ ಬೇಡ ನಮಗೆ ಬೇಡ ಎಂದು ಮಹಿಳೆ ಶಾಸಕರ ಬೆಂಬಲಿಗರಿಗೆ ಜಾಡಿಸಿದ್ದಾರೆ. ಈ ವೇಳೆ, ಸೀರೆ ಹಂಚಲು ಬಂದಿದ್ದ ವ್ಯಕ್ತಿ ಮಹಿಳೆಗೆ ಸಮಜಾಯಿಸಿ ನೀಡಲು ಮುಂದಾಗಿದ್ದನಾದರೂ, ಅದ್ಯಾವುದಕ್ಕೂ ಸೊಪ್ಪು ಹಾಕದ ಮಹಿಳೆ, ಸೀರೆ ಕೊಳ್ಳಲು ನಮ್ಮ ಬಳಿ ಹಣವಿಲ್ಲವೇ? ಎಂಧೂ ಪ್ರಶ್ನಿಸಿ ನಿಮ್ಮ ಸೀರೆ ಬೇಡವೇ ಬೇಡ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಮಹಿಳೆಗೆ ಆಕೆಯ ಕುಟುಂಬಸ್ಥರು ಹಾಗೂ ಸ್ಥಳಿಯರು ಬೆಂಬಲಿಸಿದ್ದು, ಶಾಸಕರ ಬೆಂಬಲಿಗರನ್ನು ಮರಳಿ ಕಳಿಸಿದ್ದಾರೆ.