ಬೆಂಗಳೂರು: ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತದಲ್ಲಿ ನಡೆಯಲಿರುವ ಸುದ್ದಿಗೋಷ್ಟಿಯಲ್ಲಿ ನಟ ಸುದೀಪ್ ಬಿಜೆಪಿ ಸೇರಲಿದ್ದಾರೆ ಎನ್ನುವ ಸುದ್ದಿಗಳ ಬಗ್ಗೆ ಕೊನೆಗೂ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.
ನಿನ್ನೆ ರಾತ್ರಿಯಿಂದಲೇ ಸುದೀಪ್ ಬಿಜೆಪಿ ಸೇರ್ಪಡೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ಇಂದು ಪತ್ರಕರ್ತರ ಜೊತೆ ಮಾತನಾಡಿದ ಸುದೀಪ್, ‘‘ಇಲ್ಲಿ ಕೆಲವು ವಿಚಾರಗಳ ಬಗ್ಗೆ ಮಾತನಾಡಲು ಸಾಧ್ಯ. ಇನ್ನೂ ಕೆಲವು ವಿಚಾರಗಳ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಇಂದು ನಾನು ಸುದ್ದಿಗೋಷ್ಟಿಗೆ ಹೋಗುತ್ತಿರುವುದು ಸತ್ಯ. ಆದರೆ ಅಲ್ಲಿ ಏನು ಮಾತನಾಡಬೇಕೋ ಅದನ್ನು ಮಾತನಾಡುತ್ತೇನೆ. ನಾನು ಎಲ್ಲಿಂದಲೂ, ಯಾವ ಪಕ್ಷಕ್ಕಾಗಿಯೂ ಸ್ಪರ್ಧಿಸುತ್ತಿಲ್ಲ’’ ಎಂದರು.
ಪ್ರಚಾರಕ್ಕೆ ಹೋಗುವ ಬಗ್ಗೆ ಮಾತನಾಡಿದ ಅವರು, ನಾನು ಕಷ್ಟದ ಸಮಯದಲ್ಲಿದ್ದಾಗ, ಚಿತ್ರರಂಗದ ಆರಂಭದ ದಿನಗಳಲ್ಲಿ ನನ್ನ ಜೊತೆ ನಿಂತಿದ್ದವರು ಹಲವರಿದ್ದಾರೆ. ಅವರಿಗೆ ಬೇಕಾದಾಗ ಅವರ ಜೊತೆ ನಿಲ್ಲೋದರಲ್ಲಿ ಯಾವುದೇ ತಪ್ಪಿಲ್ಲ ಎಂದರು.
ನಾನೊಬ್ಬ ನಟ. ಈಗಾಗಲೇ 3 ಸಿನೆಮಾಗಳನ್ನು ಒಪ್ಪಿಕೊಂಡಿದ್ದೇನೆ. ಚಿಕ್ಕಪೇಟೆಯಿಂದ ನಾನು ಸ್ಪರ್ಧಿಸುತ್ತೇನೆ ಎನ್ನುವುದು ಸುಳ್ಳು. ಎಲ್ಲ ಪಕ್ಷಗಳಲ್ಲೂ ನನ್ನ ಆತ್ಮೀಯರಿದ್ದಾರೆ ಎಂದು ಸುದೀಪ್ ಹೇಳಿದರು.
ಇನ್ನು ಈ ನಡುವೆ ಖಾಸಗಿ ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಸುದೀಪ್ ಅವರಿಗೆ ದುಷ್ಕರ್ಮಿಗಳು ಬೆದರಿಕೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತಂತೆ ಸುದೀಪ್ ಆಪ್ತ ಜಾಕ್ ಮಂಜು ದೂರು ನೀಡಿದ್ದಾರೆ. ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಇನ್ನು ಖಾಸಗಿ ವಿಡಿಯೋ ಬಿಡುಗಡೆ ಬೆದರಿಕೆ ಪತ್ರದ ಬಗ್ಗೆ ಉತ್ತರಿಸಿದ ಅವರು, ಮನೆಯ ಅಡ್ರೆಸ್ ಗೊತ್ತಿದೆ. ಲೆಟರ್ ಹಾಕಿದ್ದಾರೆ. ಇದಕ್ಕೆ ನಾನು ಸೂಕ್ತ ಉತ್ತರ ನೀಡುತ್ತೇನೆ. ಎಲ್ಲ ವಿಚಾರ ಹೊರಗೆ ಬರುತ್ತೆ. ಚಿತ್ರರಂಗದಲ್ಲೂ ನನಗಾಗದವರು ಇದ್ದಾರೆ. ಇದರ ಹಿಂದೆ ಯಾರಿದ್ದಾರೆ ಅನ್ನೋದು ಗೊತ್ತಿದೆ ಎಂದರು.