ಬೆಳಗಾವಿ: ಸುದೀಪ್ ಬಂದು ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ರೆ ಅದರಿಂದ ಜನಸಾಮಾನ್ಯರಿಗೆ ಸಿಗೋ ಲಾಭ ಏನು ? ಅವರು ಪ್ರಚಾರ ಮಾಡಿದ ತಕ್ಷಣ ಏರಿಕೆಯಾಗಿರುವ ಬೆಲೆ ಕಡಿಮೆಯಾಗುತ್ತಾ ಎಂದು ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.
ನಟ ಸುದೀಪ್ ಯಾವುದೇ ಪಕ್ಷ ಸೇರಲು ಸ್ವತಂತ್ರರು, ಆದರೆ ನಟ ನಟಿಯರು ಪ್ರಚಾರ ಮಾಡಿದಾಕ್ಷಣ ಗಗನಕ್ಕೇರಿದ ಬೆಲೆ ಕಡಿಮೆ ಆಗುವುದಿಲ್ಲ. ಸುದೀಪ್ ಬಿಜೆಪಿಗೆ ಸೇರುವುದಿಲ್ಲ ಎಂದಿದ್ದು, ಈ ಹಿಂದೆಯೂ ಅವರು ಪ್ರಚಾರಕ್ಕೆ ಬಂದಿದ್ದನ್ನು ನಾನು ನೋಡಿದ್ದೇನೆ. ಸುದೀಪ್ ಅಭಿಮಾನಿಗಳು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮೂರು ಪಕ್ಷದಲ್ಲಿದ್ದಾರೆ. ಇದರಿಂದ ಅವರೇ ಸಮಸ್ಯೆಗೆ ಸಿಲುಕಲಿದ್ದಾರೆ ಎಂದರು.
ಬಿಜೆಪಿಯವರು ಚುನಾವಣೆ ಗೆಲ್ಲಲು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತಾರೆ. ಮೀಸಲಾತಿ ವಿಚಾರದಲ್ಲಿ ಬಿಜೆಪಿಯ ನಿಲುವು ಎಲ್ಲರಿಗೂ ಗೊತ್ತೇ ಇದೆ. ಈ ಹಿಂದೆ ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿ ಮಾಡುವುದಾಗಿ ಹೇಳಿ ಬಹಳ ಜನರನ್ನು ಸೆಳೆಯುವ ಪ್ರಯತ್ನ ಮಾಡಿದ್ದರು. ಅದರಲ್ಲಿ ಯಶಸ್ವಿ ಕೂಡ ಆಗಿದ್ದರು.ಆದ್ರೆ ರಾಮುಲು ಡಿಸಿಎಂ ಆಗಲೇ ಇಲ್ಲ. ಅವರ ಬೆಂಬಲಿಗರು ಮಾತ್ರ ನಿರಾಶೆಗೊಂಡ್ರು ಅಷ್ಟೆ.
ಇದೀಗ ಚುನಾವಣೆ ಗೆಲ್ಲಲು ಸುದೀಪ್ ಅವರನ್ನೇ ಸಿಎಂ ಅಭ್ಯರ್ಥಿ ಎಂದು ಘೋಷಿಸಿದರೂ ಆಶ್ಚರ್ಯವಿಲ್ಲ. ಸರ್ಕಾರಗಳು ವಿಫಲವಾದಾಗ ಹೀಗೆಲ್ಲಾ ಸರ್ಕಸ್ ಮಾಡಬೇಕಾಗುತ್ತೆ ಎಂದು ಬಿಜೆಪಿಯನ್ನು ಟೀಕಿಸಿದ್ರು