ಮುಂಬೈ: ಶಸ್ತ್ರಚಿಕಿತ್ಸೆಯ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿನಿಯೋರ್ವಳು ಆಂಬುಲೆನ್ಸ್ ನಲ್ಲಿ ಮಲಗಿಕೊಂಡೇ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿರುವ ಘಟನೆ ಮುಂಬೈನ ಬಾಂದ್ರಾದಲ್ಲಿ ನಡೆದಿದೆ. ಅಂಜುಮನ್-ಎ-ಇಸ್ಲಾಂ ಶಾಲೆಯ ವಿದ್ಯಾರ್ಥಿನಿ ಮುಬಾಶಿರ್ ಸಾದಿಕ್ ಸೈಯದ್ ಎಂಬ ವಿದ್ಯಾರ್ಥಿನಿಯೇ ಈ ಸಾಹಸಿ.
ಶುಕ್ರವಾರ ಒಂದು ವಿಷಯದ ಪರೀಕ್ಷೆ ಮುಗಿಸಿ ಮನೆಗೆ ಬರುತ್ತಿರುವಾಗ ಹಿಲ್ ರೋಡ್‍ನಲ್ಲಿ ಕಾರು ಅಪಘಾತವಾಗಿತ್ತು. ಈ ವೇಳೆ ಎಡಪಾದಕ್ಕೆ ತೀವ್ರ ಗಾಯಗಳಾಗಿ ತಕ್ಷಣ ಶಸ್ತ್ರಚಿಕಿತ್ಸೆ ನಡೆಸಬೇಕಾದ ಅನಿವಾರ್ಯತೆ ಉಂಟಾಗಿತ್ತು. ಆದರೂ ಸಹ ಧೃತಿಗೆಡೆದ ಮುಬಾಶಿರ್ ಮುಂದಿನ ಪರೀಕ್ಷೆ ಬರೆಯುವ ಸಾಧ್ಯತೆಗಳ ಬಗ್ಗೆ ಶಾಲೆಯವರ ಬಳಿ ಚರ್ಚಿಸಿ ಶಸ್ತ್ರಚಿಕಿತ್ಸೆಗೆ ಒಳಗಾದಳು. ಬಳಿಕ ಸೋಮವಾರ ಕ್ಯಾನ್ಸರ್ ನೆರವು ಪ್ರತಿಷ್ಠಾನ ಕಲ್ಪಿಸಿದ್ದ ಆಂಬುಲೆನ್ಸ್‍ನಲ್ಲಿ ಶಾಲೆ ತಲುಪಿ ಅಲ್ಲಿಂದಲೇ ಪರೀಕ್ಷೆ ಬರೆದಿದ್ದಾಳೆ.
ಮುಬಾಶಿರ್ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ, ಆಕೆ ಕಲಿಕೆಯಲ್ಲಿ ತೀವ್ರ ಆಸಕ್ತಿ ಹೊಂದಿದ್ದಳು ಎಂದರು ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.