ರಾಯಚೂರು: ಕರೆಂಟ್ ಶಾಕ್‌ಗೆ (Electric Shock) ಸರಕಾರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು (Student) ಬಲಿಯಾಗಿರುವ ಘಟನೆ ರಾಯಚೂರು (Raichur) ಜಿಲ್ಲೆ ಸಿಂಧನೂರು (Sindhanoor) ತಾಲೂಕಿನ ಕುರಕುಂದಾ ಗ್ರಾಮದಲ್ಲಿ ನಡೆದಿದೆ.
ಮೃತಳನ್ನು ತನುಶ್ರೀ (11) ಎಂದು ಗುರುತಿಸಲಾಗಿದೆ. ಈಕೆ ಕುರಕುಂದಾ ಗ್ರಾಮದ ಶಾಮಣ್ಣ ಎಂಬವರ ಪುತ್ರಿ.
ನಡೆದಿದ್ದೇನು..?: ಗ್ರಾಮದ ಕಿರಿಯ ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದ ತನುಶ್ರೀ, ಓದಿನಲ್ಲಿಯೂ ಜಾಣೆಯಾಗಿದ್ದಳು. ಒಂದು ದಿನವೂ ತಪ್ಪಿಸದೆ ಶಾಲೆಗೆ ತೆರಳುತ್ತಿದ್ದಳು. ಶಿಕ್ಷಕಯೊಬ್ಬರು ಬಾಟಲ್ನಲ್ಲಿ ನೀರು ತುಂಬಿಸಿಕೊಂಡು ಬರಲು ಹೇಳಿದ ಕಾರಣ ಆಕೆ ವಾಟರ್ ಪ್ಯೂರಿಫೈರ್ ಬಳಿ ತೆರಳಿ ಸ್ವಿಚ್ ಆನ್ ಮಾಡಿದ್ದಾಳೆ. ಆ ವೇಳೆ ಬಾಲಕಿಯ ಎಡಗೈಗೆ ವಿದ್ಯುತ್ ಶಾಕ್ ತಗುಲಿದ್ದು, ಅಲ್ಲೇ ಆಕೆ ಕುಸಿದು ಬಿದ್ದಿದ್ದಾಳೆ.
ಇದನ್ನೂ ಓದಿ: ಅಬ್ಬಬ್ಬಾ.. ಮೂವರನ್ನು ಕೊಂ*ದು ಬೆಂಗಳೂರಿಗೆ ಬಂದ ಆರೋಪಿ ಪೊಲೀಸರ ಮುಂದೆ ಹೇಳಿದ್ದೇನು ಗೊತ್ತಾ..?
ಇದನ್ನು ಗಮನಿಸಿದ ಶಿಕ್ಷಕರು ಕೂಡಲೇ ಸ್ಥಳೀಯ ವೈದ್ಯರೊಬ್ಬರನ್ನ ಕರೆಸಿ ಚಿಕಿತ್ಸೆ ಕೊಡಿಸುವ ಯತ್ನ ಮಾಡಿದ್ದಾರೆ. ವೈದ್ಯರು ತನುಶ್ರೀ ಸ್ಥಿತಿ ಗಂಭಿರವಾಗಿದೆ ಎಂದು ಹೇಳಿದ ಕಾರಣ ಸಿಂಧನೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ತಾಲೂಕು ಆಸ್ಪತ್ರೆ ಆವರಣದಲ್ಲಿಯೇ ಆಕೆ ಮೃತಪಟ್ಟಿದ್ದಾಳೆ.
ಘಟನೆ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ನಿತೀಶ್ ಕೆ., ಸಿಂಧನೂರು ತಹಶಿಲ್ದಾರ್ ಗೆ ಆದೇಶಿಸಿದ್ದಾರೆ. ಬಿಇಒ, ತಹಶೀಲ್ದಾರ್, ಜೆಸ್ಕಾಂ ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡಲಿದ್ದು, ಅದರ ಆಧಾರದಲ್ಲಿ ತಪ್ಪಿತಸ್ಥ ಶಾಲಾ ಸಿಬ್ಬಂದಿ ವಿರುದ್ಧ ಕ್ರಮ ಆಗಲಿದೆ. ಜೊತೆಗೆ ಜಿಲ್ಲೆಯ ಉಳಿದ ಶಾಲೆಗಳಲ್ಲಿಯೂ ವಿದ್ಯುತ್ ಸಮಸ್ಯೆಗಳಿದ್ದರೆ ತಕ್ಷಣ ಪರಿಶೀಲಿಸಿ ಕ್ರಮಕ್ಕೆ ಸೂಚಿಸಲಾಗಿದೆ. ಮೃತಳ ಕುಟುಂಬಕ್ಕೆ ಪರಿಹಾರ ನೀಡೋ ಭರವಸೆ ಜಿಲ್ಲಾಧಿಕಾರಿಗಳಿಂದ ಸಿಕ್ಕಿದೆ.
ಇನ್ನು ಘಟನಾ ಸ್ಥಳಕ್ಕೆ ತುರ್ವಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತಳ ತಂದೆ ಶಾಮಣ್ಣ ನೀಡಿದ ದೂರಿನನ್ವಯ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಕೇಸ್ ದಾಖಲಾಗಿದೆ.
ಬೀದರ್ ಸ್ಫೋಟ ತನಿಖೆಗೆ ಈಶ್ವರ್ ಖಂಡ್ರೆ ಆದೇಶ: ಹುಮ್ನಾಬಾದ್ ಸಮೀಪ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು ಆತಂಕ ಮೂಡಿಸಿದೆ. ಹುಮ್ನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಶಾಲಾ ಮಕ್ಕಳು ಸೇರಿ 6 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಸಚಿವ ಈಶ್ವರ್ ಖಂಡ್ರೆ ತನಿಖೆಗೆ ಆದೇಶಿಸಿದ್ದಾರೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮತ್ತು ತಜ್ಞರು ಘಟನಾ ಸ್ಥಳಕ್ಕೆ ತೆರಳಿ ಯಾವುದರಿಂದ ಸ್ಫೋಟ ಸಂಭವಿಸಿದೆ ಎಂಬ ಮಾದರಿ ಸಂಗ್ರಹಿಸಿ ತನಿಖೆ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಈಶ್ವರ್ ಖಂಡ್ರೆ ಆದೇಶಿಸಿದ್ದಾರೆ.
ಇನ್ನು ಈ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆಗೆ ಒಳಪಟ್ಟವರಿಗೆ ಸೂಕ್ತ ನೀಡಲು ನಿರ್ದೇಶಿಸಿದ್ದು, ಜಿಲ್ಲಾಡಳಿತಕ್ಕೆ ಚಿಕಿತ್ಸಾ ವೆಚ್ಚ ಭರಿಸಲು ಸೂಚಿಸಿದ್ದಾರೆ.ಈ ಸ್ಫೋಟ ಹೇಗೆ ಸಂಭವಿಸಿದೆ,ಇದಕ್ಕೆ ಕಾರಣವೇನು, ಸ್ಫೋಟಕ್ಕೆ ಬಳಕೆಯಾಗಿರುವ ವಸ್ತು ಯಾವುದು? ಈ ಎಲ್ಲದರ ತನಿಖೆಯ ನಂತರವೇ ತಿಳಿಯಬೇಕಿದೆ.