Thursday, July 16, 2026
Homeಟಾಪ್ ನ್ಯೂಸ್IRAN: ಹಾರ್ಮುಜ್ ಜಲಸಂಧಿ ಹೊರಗಿನ ಶಕ್ತಿಗಳ ಮಿಲಿಟರಿ ಪ್ರದರ್ಶನಕ್ಕೆ ವೇದಿಕೆಯಲ್ಲ: ಇರಾನ್ ಎಚ್ಚರಿಕೆ

IRAN: ಹಾರ್ಮುಜ್ ಜಲಸಂಧಿ ಹೊರಗಿನ ಶಕ್ತಿಗಳ ಮಿಲಿಟರಿ ಪ್ರದರ್ಶನಕ್ಕೆ ವೇದಿಕೆಯಲ್ಲ: ಇರಾನ್ ಎಚ್ಚರಿಕೆ

ಟೆಹ್ರಾನ್: ಜಾಗತಿಕ ಇಂಧನ ಸಾಗಣೆಯ ಆಯಕಟ್ಟಿನ ಜಲಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯು (Strait of Hormuz) ಪ್ರಾದೇಶಿಕೇತರ ಅಥವಾ ಹೊರಗಿನ ಮಿಲಿಟರಿ ಶಕ್ತಿ ಪ್ರದರ್ಶನದ (Iran) ವೇದಿಕೆಯಲ್ಲ ಎಂದು ಇರಾನ್‌ನ ಉಪ ವಿದೇಶಾಂಗ ಸಚಿವ ಕಾಜೆಮ್ ಘರಿಬಾಬಾದಿ ಎಚ್ಚರಿಕೆ ನೀಡಿದ್ದಾರೆ.

ಹಾರ್ಮುಜ್ ಜಲಸಂಧಿಯ ಭದ್ರತೆಗೆ ಸಂಬಂಧಿಸಿದಂತೆ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರು ಹೊರಡಿಸಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್, ಪ್ರದೇಶದಲ್ಲಿ ಬಿಕ್ಕಟ್ಟು ಸೃಷ್ಟಿಸುವ ಶಕ್ತಿಗಳು ಇದರ ಪರಿಣಾಮಗಳಿಗೆ ನೇರ ಹೊಣೆಯಾಗಬೇಕಾಗುತ್ತದೆ, ಎಂದು ಗುಡುಗಿದೆ.

ಹಾರ್ಮುಜ್‌ನ ಭದ್ರತೆ ಇರಾನ್ ಕಮಾಂಡ್ ಅಡಿಯಲ್ಲಿದೆ
ಇರಾನ್ ಉಪ ವಿದೇಶಾಂಗ ಸಚಿವ ಕಾಜೆಮ್ ಘರಿಬಾಬಾದಿ ಅವರು ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪಾಶ್ಚಿಮಾತ್ಯ ದೇಶಗಳಿಗೆ ನೇರ ಎಚ್ಚರಿಕೆ ನೀಡಿದ್ದಾರೆ. ಹಾರ್ಮುಜ್ ಜಲಸಂಧಿಯು ಹೊರಗಿನ ಶಕ್ತಿಗಳ ಮಿಲಿಟರಿ ಪ್ರದರ್ಶನಕ್ಕೆ ಜಾಗವಲ್ಲ. ಈ ಜಲಮಾರ್ಗದ ಸುರಕ್ಷತೆಯ ಗ್ಯಾರಂಟಿ ಹಾಗೂ ಜವಾಬ್ದಾರಿಯುತ ಶಕ್ತಿಯಾಗಿರುವ ಇರಾನ್, ಇಲ್ಲಿ ನಡೆಯುವ ಯಾವುದೇ ದೇಶಗಳ ಸೇನಾ ಹಸ್ತಕ್ಷೇಪ ಅಥವಾ ಚಲನವಲನಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಹಾರ್ಮುಜ್‌ನ ಸಂಪೂರ್ಣ ಭದ್ರತೆಯು ಕರಾವಳಿ ದೇಶಗಳಿಗೆ ಸೇರಿದ್ದು. ಅನಗತ್ಯ ಸಾಹಸಕ್ಕೆ ಕೈಹಾಕಿ ಬಿಕ್ಕಟ್ಟು ಸೃಷ್ಟಿಸುವವರು ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇದು ನಮ್ಮ ಕಡೆಯಿಂದ ನೀಡಲಾಗುತ್ತಿರುವ ಅತ್ಯಂತ ಗಂಭೀರವಾದ ಎಚ್ಚರಿಕೆ, ಎಂದು ಬರೆದುಕೊಂಡಿದ್ದಾರೆ.

ಬ್ರಿಟನ್ ಮತ್ತು ಫ್ರಾನ್ಸ್ ಹೇಳಿಕೆಯಲ್ಲೇನಿದೆ?
ಒಮಾನ್ ಬ್ರಿಟನ್ ಹಾಗೂ ಫ್ರಾನ್ಸ್ ದೇಶಗಳೊಂದಿಗೆ ಜಂಟಿಯಾಗಿ ಕೆಲಸ ಮಾಡಲು ಒಪ್ಪಿಕೊಂಡ ಬೆನ್ನಲ್ಲೇ ಈ ವಿವಾದಾತ್ಮಕ ಹೇಳಿಕೆ ಹೊರಬಿದ್ದಿದೆ. ಹಾರ್ಮುಜ್ ಜಲಸಂಧಿಯು ಜಾಗತಿಕ ಆರ್ಥಿಕತೆಯ ಅತ್ಯಂತ ಪ್ರಮುಖ ಪ್ರದೇಶ ಆಗಿದೆ. ಎಲ್ಲಾ ದೇಶಗಳ ಹಡಗುಗಳು ಈ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಸಾಗುವಂತೆ ಮಾಡುವುದು ಇಡೀ ವಿಶ್ವದ ಕಳಕಳಿಯಾಗಿದೆ. ಈ ಹಿನ್ನೆಲೆಯಲ್ಲಿ ಒಮಾನ್ ಸುಲ್ತಾನೇಟ್ ತನ್ನ ಸಾರ್ವಭೌಮ ಪ್ರಾದೇಶಿಕ ಜಲಪ್ರದೇಶವನ್ನು ನೌಕಾಯಾನಕ್ಕೆ ಸುರಕ್ಷಿತವಾಗಿಸಲು ಯುನೈಟೆಡ್ ಕಿಂಗ್‌ಡಮ್ (UK) ಮತ್ತು ಫ್ರಾನ್ಸ್‌ನೊಂದಿಗೆ ಕೆಲಸ ಮಾಡಲು ಒಪ್ಪಿಕೊಂಡಿದೆ, ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು.
ಅಷ್ಟೇ ಅಲ್ಲದೆ, ಹಾರ್ಮುಜ್ ಜಲಸಂಧಿಯಲ್ಲಿ ನೌಕಾಯಾನದ ಸ್ವಾತಂತ್ರ್ಯವನ್ನು ಬೆಂಬಲಿಸಲು ಬ್ರಿಟನ್ ಮತ್ತು ಫ್ರಾನ್ಸ್ ತಮ್ಮ ಬಹುರಾಷ್ಟ್ರೀಯ ಮಿಲಿಟರಿ ಮಿಷನ್ (ಸೇನಾ ಪಡೆ) ಅನ್ನು ನಿಯೋಜಿಸಲು ಸಿದ್ಧವಾಗಿವೆ. ಜಾಗತಿಕ ಭದ್ರತೆ ಹಾಗೂ ಅಂತರರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯಲು ನಾವು ಬದ್ಧರಾಗಿದ್ದೇವೆ, ಎಂದು ಉಭಯ ದೇಶಗಳು ಪ್ರಕಟಣೆಯಲ್ಲಿ ತಿಳಿಸಿದ್ದವು. ಪಾಶ್ಚಿಮಾತ್ಯ ದೇಶಗಳ ಈ ನೇರ ಸೇನಾ ನಿಯೋಜನೆಯ ಪ್ರಸ್ತಾಪವೇ ಇರಾನ್‌ನ ಸಿಟ್ಟಿಗೆ ಕಾರಣವಾಗಿದೆ.

ಇದು ಸೆಂಟ್‌ಕಾಮ್ ಅಲ್ಲ, ಇರಾನ್ ಕಮಾಂಡ್!
ಇದಕ್ಕೂ ಮುನ್ನ ಜುಲೈ 2 ರಂದು ಬಹ್ರೇನ್‌ನಲ್ಲಿ ಅಮೆರಿಕದ ನೇತೃತ್ವದಲ್ಲಿ ನಡೆದ ಪ್ರಾದೇಶಿಕ ಭದ್ರತಾ ಶೃಂಗಸಭೆಯನ್ನು ಇರಾನ್ ಖಂಡಿಸಿತ್ತು. ಪರ್ಷಿಯನ್ ಗಲ್ಫ್ ಹಾಗೂ ಹಾರ್ಮುಜ್ ಜಲಸಂಧಿಯ ಭದ್ರತಾ ಚೌಕಟ್ಟನ್ನು ತಮ್ಮ ಇಚ್ಛೆಯಂತೆ ನಿರ್ದೇಶಿಸಲು ಹೊರಟಿರುವ ಪಾಶ್ಚಿಮಾತ್ಯ ದೇಶಗಳ ಕ್ರಮವನ್ನು ಇರಾನ್ ತಿರಸ್ಕರಿಸಿದೆ.
ಬಹ್ರೇನ್ ಮಿಲಿಟರಿ ಶೃಂಗಸಭೆಯ ಕಾನೂನುಬದ್ಧತೆಯನ್ನು ಪ್ರಶ್ನಿಸಿದ್ದ ಘರಿಬಾಬಾದಿ, ಹಾರ್ಮುಜ್ ಜಲಸಂಧಿಯ ವ್ಯಾಪ್ತಿಯನ್ನು ಇರಾನ್‌ನ ಕಮಾಂಡ್ ಅಡಿಯಲ್ಲಿ ವ್ಯಾಖ್ಯಾನಿಸಲಾಗುತ್ತದೆಯೇ ಹೊರತು ಅಮೆರಿಕದ ಸೆಂಟ್‌ಕಾಮ್ (CENTCOM) ಅಡಿಯಲ್ಲಲ್ಲ. ಬಹ್ರೇನ್‌ನಲ್ಲಿ ನಡೆಯುವ ಮಿಲಿಟರಿ ಶೃಂಗಸಭೆಗಳು ಪರ್ಷಿಯನ್ ಗಲ್ಫ್ ಪ್ರದೇಶಕ್ಕೆ ಕಾನೂನುಬದ್ಧ ಆದೇಶ ಅಥವಾ ಭದ್ರತೆಯನ್ನು ತರಲು ಎಂದಿಗೂ ಸಾಧ್ಯವಿಲ್ಲ, ಎಂದು ಅಮೆರಿಕದ ಸೇನಾ ಕಮಾಂಡ್‌ನ ಅಧಿಕಾರ ವ್ಯಾಪ್ತಿಯನ್ನು ತಳ್ಳಿಹಾಕಿದ್ದಾರೆ.

ಇದನ್ನೂ ಓದಿ : ನಿಮ್ಮ ದೇಶದಲ್ಲೇ ಕೋಟ್ಯಂತರ ಜನ ಊಟಕ್ಕೆ ಪರದಾಡುತ್ತಿದ್ದಾರೆ, ಮೊದಲು ಅದನ್ನು ನೋಡಿಕೊಳ್ಳಿ -ಟ್ರಂಪ್‌ಗೆ ಇರಾನ್ ತಿರುಗೇಟು

ಹೆಚ್ಚಿನ ಸುದ್ದಿ

Change Language »
error: Content is protected !!